ADVERTISEMENT

ಹಾಸನದಲ್ಲಿ ಸಿರಿಧಾನ್ಯ ಮೇಳ | ರೈತರಿಗೆ ತಾಂತ್ರಿಕ ಜ್ಞಾನ; ಹೊಸ ತಳಿ ಪರಿಚಯ

ಜಿಲ್ಲಾ ಕೇಂದ್ರದಲ್ಲಿ ಪ್ರಥಮ ಬಾರಿಗೆ ಆಲೂಗಡ್ಡೆ, ಸಿರಿಧಾನ್ಯ ಮೇಳ: ಜಿಲ್ಲೆ, ನೆರೆಯ ಜಿಲ್ಲೆಗಳಿಂದ ನೂರಾರು ಕೃಷಿಕರು ಭಾಗಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:04 IST
Last Updated 28 ಜನವರಿ 2026, 7:04 IST
ಸಿರಿಧಾನ್ಯ ಉತ್ಪನ್ನಗಳ ಮಳಿಗೆಯಲ್ಲಿ ವ್ಯಾಪಾರ ಜೋರಾಗಿತ್ತು.
ಸಿರಿಧಾನ್ಯ ಉತ್ಪನ್ನಗಳ ಮಳಿಗೆಯಲ್ಲಿ ವ್ಯಾಪಾರ ಜೋರಾಗಿತ್ತು.   

ಹಾಸನ: ಜಿಲ್ಲಾ ಕೇಂದ್ರದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಎರಡು ದಿನಗಳ ಆಲೂಗಡ್ಡೆ ಹಾಗೂ ಸಿರಿಧಾನ್ಯ ಮೇಳ ಯಶಸ್ವಿಯಾಗಿ ನೆರವೇರಿತು. ಮೇಳದಲ್ಲಿ ನೂರಾರು ರೈತರು, ಮಹಿಳೆಯರು, ಯುವ ಕೃಷಿಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಕೃಷಿ, ಪೌಷ್ಟಿಕ ಆಹಾರ ಮತ್ತು ಮೌಲ್ಯವರ್ಧನೆ ಕುರಿತು ಮಾಹಿತಿ ಪಡೆದರು.

ಆಲೂಗಡ್ಡೆ ಹಾಗೂ ಸಿರಿಧಾನ್ಯಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಮಳಿಗೆಗಳನ್ನು ತೆರೆಯಲಾಗಿತ್ತು. ದೇಶದಲ್ಲೇ ಆಲೂಗಡ್ಡೆ ಕೃಷಿಯಲ್ಲಿ ಹೆಸರು ಪಡೆದಿರುವ ಹಾಸನ ಜಿಲ್ಲೆಯಲ್ಲಿ ಮತ್ತೊಮ್ಮೆ ಆಲೂಗಡ್ಡೆ ಬೆಳೆಗೆ ಉತ್ತೇಜನ ನೀಡುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ವಿವಿಧ ಬಗೆಯ ಆಲೂಗಡ್ಡೆ ತಳಿಗಳ ಪ್ರದರ್ಶನ ಏರ್ಪಡಿಸಿತ್ತು.

ಜೊತೆಗೆ ಅಂಗಾಂಶ ಕೃಷಿ ಪದ್ಧತಿಯಡಿ ಆಲೂಗಡ್ಡೆ ಸಸಿಗಳ ಬೆಳವಣಿಗೆ, ನಿರ್ವಹಣೆ ಮತ್ತು ಲಾಭದಾಯಕ ಕೃಷಿ ವಿಧಾನಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಆಲೂಗಡ್ಡೆ ಬಿತ್ತನೆ ಬೀಜಗಳ ಪ್ರದರ್ಶನದ ಜೊತೆಗೆ ಬಿತ್ತನೆಯಿಂದ ಹಿಡಿದು ಬೆಳೆ ಕಟಾವಿನವರೆಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳು ಔಷಧಿಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.

ADVERTISEMENT

‘ಶತಮಾನಗಳಿಂದಲೂ ಹಾಸನ ಜಿಲ್ಲೆ ಆಲೂಗಡ್ಡೆ ಬೆಳೆಗೆ ಹೆಸರುವಾಸಿಯಾಗಿದ್ದು, ಈ ಬಾರಿ ನಡೆದ ಮೇಳದಲ್ಲಿ ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಇತರೆ ರಾಜ್ಯಗಳಿಂದಲೂ ವಿವಿಧ ಬಗೆಯ ಆಲೂಗಡ್ಡೆ ತಳಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಇದರಿಂದ ರೈತರಿಗೆ ಹೊಸ ತಳಿಗಳು ಮತ್ತು ಆಧುನಿಕ ಕೃಷಿ ವಿಧಾನಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿದೆ’ ಎಂದು ಚನ್ನರಾಯಪಟ್ಟಣದ ಮಹೇಶ್ ಅಭಿಪ್ರಾಯಪಟ್ಟರು.

ಪಾಕ ಸ್ಪರ್ಧೆ: ಕೃಷಿ ಇಲಾಖೆಯಿಂದ ನಾನಾ ಬಗೆಯ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಸಿರಿಧಾನ್ಯಗಳಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳ ಪಾಕ ಸ್ಪರ್ಧೆ ವಿಶೇಷ ಆಕರ್ಷಣೆಯಾಗಿ ಮೂಡಿಬಂತು.

ಸುಮಾರು 70ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ, ತಮ್ಮ ಪಾಕಪ್ರಾವೀಣ್ಯ ಪ್ರದರ್ಶಿಸಿದರು. ಮರೆತು ಹೋಗಿದ್ದ ಸಾಂಪ್ರದಾಯಿಕ ಸಿರಿಧಾನ್ಯ ಖಾದ್ಯಗಳನ್ನು ಮಹಿಳೆಯರು ಮೇಳದಲ್ಲಿ ಪರಿಚಯಿಸಿದ್ದು ವಿಶೇಷವಾಗಿತ್ತು.

ಮೇಳದ ಸಂದರ್ಭದಲ್ಲಿ ರೈತರಿಗೆ ಸಿರಿಧಾನ್ಯ ಬೆಳೆಯ ಮಹತ್ವ, ಆರೋಗ್ಯಕರ ಆಹಾರ ಪದ್ಧತಿ ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿಜ್ಞಾನಿಗಳಿಂದ ಅರಿವು ಮೂಡಿಸಲಾಯಿತು.

ಸಿರಿಧಾನ್ಯ ಬೆಳೆಯುವ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎರಡು ಹೆಕ್ಟೇರ್ ಪ್ರದೇಶಕ್ಕೆ ₹ 20ಸಾವಿರ ಸಹಾಯಧನ ಹಾಗೂ ಸಂಸ್ಕರಣ ಘಟಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.

ವಿವಿಧ ತಳಿಯ ಆಲೂಗಡ್ಡೆ ಅಂಗಾಂಶ ಕೃಷಿಯ ಸಸಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು. 
ಮೇಳದಲ್ಲಿದ್ದ ಜನರು.
ಸುರೇಶ್‌
ಶಂಕರ್‌
ಎಚ್.ಆರ್. ಯೋಗೇಶ್
ರಮೇಶ್‌ಕುಮಾರ್‌

ಅಂಗಾಂಶ ಕೃಷಿಯಿಂದ ಬೆಳೆದ ಸಸಿಗಳ ಕುರಿತು ಪ್ರಾತ್ಯಕ್ಷಿಕೆ ರೋಗರಹಿತ ಆಲೂಗಡ್ಡೆ ಬೆಳೆಯುವ ನಿಟ್ಟಿನಲ್ಲಿ ರೈತರಿಗೆ ಮಾಹಿತಿ ಸಿರಿಧಾನ್ಯಗಳ ಪಾಕ ಸ್ಪರ್ಧೆ; ಪ್ರದರ್ಶನ

25 ವರ್ಷಗಳಿಂದ ಆಲೂಗಡ್ಡೆ ಕೃಷಿ ಮಾಡುತ್ತಿದ್ದು. ಕೆಲವೊಮ್ಮೆ ಇಳುವರಿ ಕಡಿಮೆಯಾದರೂ ಪ್ರತಿವರ್ಷ ಆಲೂಗಡ್ಡೆ ಬೆಳೆಯುತ್ತಿದ್ದೇವೆ. ಈ ಮೇಳದಿಂದ ಔಷಧೋಪಚಾರ ಗೊಬ್ಬರಗಳ ಬಗ್ಗೆ ಉಪಯುಕ್ತ ಮಾಹಿತಿ ದೊರೆಯಿತು
ಸುರೇಶ್ ಬಿಟ್ಟಹಳ್ಳಿ ರೈತ
20 ವರ್ಷಗಳಿಂದ ಚಿಪ್ಸ್ ತಯಾರಿಕೆಗೆ ಬಳಸುವ ವಿಶೇಷ ಎಫ್‌ಸಿ–5 ಮತ್ತು ಎಫ್‌ಸಿ–12 ತಳಿಗಳ ಆಲೂಗಡ್ಡೆ ಬೆಳೆಯುತ್ತಿದ್ದೇನೆ. ಕಳೆದ ವರ್ಷ ಎಂಟು ಎಕರೆಯಲ್ಲಿ ಎಕರೆಗೆ ಸುಮಾರು 100 ಚೀಲ ಇಳುವರಿ ದೊರೆತಿದೆ
ಶಂಕರ್ ಅಪ್ಪೆನಹಳ್ಳಿ ಆಲೂಗಡ್ಡೆ ಬೆಳೆಗಾರ
ಮೊದಲ ಬಾರಿಗೆ ಆಲೂಗಡ್ಡೆ ಮತ್ತು ಸಿರಿಧಾನ್ಯ ಮೇಳ ಒಟ್ಟಿಗೆ ಆಯೋಜಿಸಲಾಗಿದ್ದು ರೈತರಿಗೆ ಪೂರಕ ಮಾಹಿತಿ ಒದಗಿಸಲಾಗಿದೆ. ಇತರೆ ರಾಜ್ಯಗಳ ಸಂಪನ್ಮೂಲ ವ್ಯಕ್ತಿಗಳಿಂದ ಆಲೂಗಡ್ಡೆ ಕೃಷಿಯ ಕುರಿತು ಮಾಹಿತಿ ನೀಡಲಾಯಿತು
ಯೋಗೇಶ್ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ
ಈ ಬಾರಿಯ ಮೇಳದಲ್ಲಿ ಸಿರಿಧಾನ್ಯಗಳ ಮಾಹಿತಿ ನೀಡಲಾಗಿದೆ. ವಿಶೇಷವಾಗಿ ಸಿರಿಧಾನ್ಯಗಳಿಂದ ತಯಾರಿಸಬಹುದಾದ ಖಾದ್ಯಗಳ ಪಾಕ ಸ್ಪರ್ಧೆ ಮೂಲಕ ಸಿರಿಧಾನ್ಯದ ರುಚಿ ಮಹತ್ವವನ್ನು ಜನರಿಗೆ ಪರಿಚಯಿಸಲಾಗಿದೆ
ರಮೇಶ್ ಕುಮಾರ್ ಕೃಷಿ ಇಲಾಖೆ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.