ADVERTISEMENT

ಹಾಸನ: ₹1070 ಕೋಟಿ ಪರಿಷ್ಕೃತ ಯೋಜನೆಗೆ ಒಪ್ಪಿಗೆ

ಹಾಸನದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಬಡಾವಣೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 16:05 IST
Last Updated 22 ಜುಲೈ 2022, 16:05 IST

ಬೆಂಗಳೂರು: ಹಾಸನದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ(ಹುಡಾ) ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ವಸತಿ ಬಡಾವಣೆಯ ₹1070 ಕೋಟಿ ಮೊತ್ತದ ಪರಿಷ್ಕೃತ ಯೋಜನೆಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಬೂವನಹಳ್ಳಿ, ಕೆಂಚಟ್ಟಹಳ್ಳಿ, ಗೇಕರಹಳ್ಳಿ ಮತ್ತು ಸಮುದ್ರವಳ್ಳಿ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳ 1,145 ಎಕರೆ 32 ಗುಂಟೆ ಜಾಗದಲ್ಲಿ ₹990 ಕೋಟಿ ಅಂದಾಜು ಮೊತ್ತದಲ್ಲಿ ವಸತಿ ಬಡಾವಣೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು. ಈ ಮೊತ್ತವನ್ನು ಈಗ ₹1070 ಕೋಟಿಗೆ ಹೆಚ್ಚಿಸಿರುವ ಪರಿಷ್ಕೃತ ಯೋಜನೆ ಸಚಿವ ಸಂಪುಟದ ಮುಂದೆ ಶುಕ್ರವಾರ ಮಂಡನೆಯಾಗಿತ್ತು.

ರೈತರು ಮತ್ತು ಹುಡಾ ಸಹಭಾಗಿತ್ವದಲ್ಲಿ(ಶೇ 50:50) ಬಡಾವಣೆ ನಿರ್ಮಿಸುವ ಉದ್ದೇಶವನ್ನು ನಗರಾಭಿವೃದ್ಧಿ ಪ್ರಾಧಿಕಾರ ಹೊಂದಿದೆ. ಅಭಿವೃದ್ಧಿ ಕಾಮಗಾರಿಗಳ ವರ್ಗವಾರು ಅಂದಾಜು ಪಟ್ಟಿಗಳಿಗೂ ಆಡಳಿತಾತ್ಮಕ ಅನುಮೋದನೆ ದೊರೆತಿದೆ.

ADVERTISEMENT

ಒಟ್ಟು 15,500 ನಿವೇಶನಗಳು ನಿರ್ಮಾಣವಾಗಲಿದ್ದು, ನಿವೇಶನ ಕೋರಿ 27,177 ಮಂದಿ ಅರ್ಜಿ ಸಲ್ಲಿಸಿ ಠೇವಣಿ ಪಾವತಿಸಿದ್ದಾರೆ.

ದೊಡ್ಡ ಹಗರಣ ಆಗಲಿದೆ: ಎಚ್‌ಡಿಕೆ

‘ಹಾಸನದಲ್ಲಿ ಒಂದು ಬಡಾವಣೆ ನಿರ್ಮಾಣಕ್ಕೆ ಸಾವಿರ ಕೋಟಿ ಖರ್ಚು ಮಾಡಲು ಸಚಿವ ಸಂಪುಟ ತೀರ್ಮಾನ ಮಾಡಿದೆ. ಮುಂದೆ ಇದೇ ದೊಡ್ಡ ಹಗರಣ ಆಗುವುದರಲ್ಲಿ ಅನುಮಾನ ಇಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

‘ಇದು ಅಭಿವೃದ್ಧಿ ವಿಚಾರವಾಗಿ ಅಥವಾ ಹಾಸನಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಇಲ್ಲ.ಚುನಾವಣೆಗೂ ಮುನ್ನ ಸ್ಥಳೀಯ ಶಾಸಕರು ಹಣ ಲೂಟಿ ಮಾಡಲು ಅವಕಾಶ ಕೊಟ್ಟಂತಾಗಿದೆ ಅಷ್ಟೆ. ಕೆಲವು ವರ್ಗಗಳನ್ನು ಓಲೈಸುವ ಕೆಲಸ ಆಗುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ಇದೇ ರೀತಿ ಆಗಿತ್ತು. ಈಗ ಮತ್ತೊಮ್ಮೆ ಅದೇ ಆಗುತ್ತಿದೆ’ ಎಂದು ಅವರು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.