ADVERTISEMENT

ಹಾಸನ | ಫಲಪುಷ್ಪ ಪ್ರದರ್ಶನ ಆರಂಭ: ಸಂಸದ ಶ್ರೇಯಸ್‌ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:35 IST
Last Updated 26 ಅಕ್ಟೋಬರ್ 2024, 15:35 IST
ಪುಷ್ಪದಲ್ಲಿ ಅರಳಿದ ಕಲಾಕೃತಿ
ಪುಷ್ಪದಲ್ಲಿ ಅರಳಿದ ಕಲಾಕೃತಿ   

ಹಾಸನ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಹೇಮಾವತಿ ತೋಟಗಾರಿಕೆ ಸಂಘಗಳ ಆಶ್ರಯದಲ್ಲಿ ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಅ.29 ರವರೆಗೆ ಇಲ್ಲಿನ ಸಿಲ್ವರ್ ಜ್ಯುಬಿಲಿ ಆರ್ಚಡ್ ಪಾರ್ಕ್‌ನಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನವನ್ನು ಶನಿವಾರ ಸಂಸದ ಶ್ರೇಯಸ್ ಪಟೇಲ್ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಪುಷ್ಪ ಕಲಾಕೃತಿ ಹಾಗೂ ಮತ್ತಿತರ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಫಲಪುಷ್ಪ ಪ್ರದರ್ಶನ ಚೆನ್ನಾಗಿ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡುವಂತೆ ತಿಳಿಸಿದರು.

ಜಿಲ್ಲೆಯು ಹಲವು ಪ್ರೇಕ್ಷಣೀಯ ತಾಣಗಳನ್ನು ಒಳಗೊಂಡಿದ್ದು, ಶಿಲ್ಪಕಲೆಗಳ ತವರೂರಾಗಿದೆ. ಈ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳನ್ನು ವಿವಿಧ ಫಲಪುಷ್ಪಗಳಿಂದ ಅಲಂಕರಿಸಿ ಪ್ರದರ್ಶಿಸುವ ಮೂಲಕ ಹಾಸನದ ವೈಭವವನ್ನು ಮರುಕಳಿಸಿದಂತಾಗಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನ ವಿಶೇಷವಾಗಿದೆ ಎಂದು ತಿಳಿಸಿದರು.

ADVERTISEMENT

ನಕ್ಷತ್ರಾಕಾರದ ವೇದಿಕೆಯ ಮೇಲೆ ನಿಂತಿರುವ ಚೆನ್ನಕೇಶವ ದೇವಾಲಯ, ಹೋಯ್ಸಳ ಲಾಂಛನ, ಹಳೆಬೀಡಿನ ಹೋಯ್ಸಳೇಶ್ವರ ದೇವಾಲಯ, ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಮೇಲೆ ನಿಂತಿರುವ ಗೊಮ್ಮಟೇಶ್ವರ ಪ್ರತಿಮೆಗಳನ್ನು ಪ್ರದರ್ಶಿಸಲಾಗಿದೆ.

ಹೇಮಾವತಿ ಜಲಾಶಯದ ಪ್ರತಿಕೃತಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಿ ಪ್ರದರ್ಶಿಸಲಾಗಿದೆ. ವಿವಿಧ ಹಣ್ಣು ಮತ್ತು ತರಕಾರಿಗಳನ್ನು ಬಳಸಿ ಬಗೆ ಬಗೆಯ ಪ್ರಾಣಿ ಪಕ್ಷಿಗಳನ್ನು ಕೆತ್ತನೆ ಮಾಡಿರುವುದು ನೋಡುಗರ ಕಣ್ಮನ ಸೆಳೆಯುವಂತಿದೆ. ಮಂಜರಾಬಾದ್ ಕೋಟೆ, ಬೆಟ್ಟದಿಂದ ಬಟ್ಟಲಿಗೆ ಕಾಫಿಯ ಪಯಣ, ಸೆಲ್ಫಿ ಪಾಯಿಂಟ್ ಇನ್ನಿತರೆ ಪ್ರದರ್ಶಿಕೆಗಳು ಜನರ ಕಣ್ಮನ ಸೆಳೆಯುತ್ತಿವೆ.

ಕೃಷಿ ಇಲಾಖೆಯ ವತಿಯಿಂದ ಸಿರಿಧಾನ್ಯ ಅಲಂಕಾರ, ಕೃಷಿ ಪರಿಕರಗಳು, ಕೀಟನಾಶಕಗಳು, ಮೀನುಗಾರಿಕೆ ಇಲಾಖೆಯಿಂದ ಅಲಂಕಾರಿಕ ಮೀನುಗಳು, ಅರಣ್ಯ ಇಲಾಖೆಯಿಂದ ವಿಶೇಷವಾಗಿ ಆನೆಗಳ ಕಲಾಕೃತಿಗಳು ಜನರನ್ನು ಆಕರ್ಶಿಸುತ್ತದೆ.

ನಗರಸಭೆ ಅಧ್ಯಕ್ಷ ಚಂದ್ರೇಗೌಡ ಎಂ., ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್ ಪಿ., ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಮಂಗಳಾ, ಹೇಮಾವತಿ ತೋಟಗಾರಿಕೆ ಸಂಘದ ಉಪಾಧ್ಯಕ್ಷೆ ಸುಜಾತಾ ನಾರಾಯಣ್ ಮತ್ತಿತರರು ಭಾಗವಹಿಸಿದ್ದರು.

ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿರುವ ಬೇಲೂರು ಚೆನ್ನಕೇಶವ ದೇಗುಲದ ಮಾದರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.