
ಆಲೂರು: ‘ಜೆಡಿಎಸ್ ಪಕ್ಷ ನಿರ್ಧರಿಸಿದರೆ ಅರಸೀಕೆರೆಯಲ್ಲಿ ಸ್ಪರ್ಧಿಸುವ ಮೂಲಕ, ಶಾಸಕ ಶಿವಲಿಂಗೇಗೌಡರು ಹಾಕಿರುವ ಸವಾಲನ್ನು ಸ್ವೀಕರಿಸಲು ಸಿದ್ಧ’ ಎಂದು ಹೊಳೆನರಸೀಪುರ ಶಾಸಕ ಸಚಿವ ಎಚ್.ಡಿ ರೇವಣ್ಣ ತಿಳಿಸಿದರು.
ಜ. 24 ರಂದು ಹಾಸನ ಜಿಲ್ಲೆಯಲ್ಲಿ ನಡೆಯುವ ಜೆಡಿಎಸ್ ಬೃಹತ್ ಸಮಾವೇಶದ ಸಿದ್ಧತೆ ಕುರಿತು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಪಾಳ್ಯ ಗ್ರಾಮದ ಕೆ. ಎಸ್. ಮಂಜೇಗೌಡ ಅವರ ಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್‌ನವರ ಆಟ ನಡೆಯುವುದಿಲ್ಲ. ಮೊದಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಉಸ್ತುವಾರಿ ಸಚಿವರು, ಕಳೆದ ಎರಡುವರೆ ವರ್ಷಗಳಲ್ಲಿ ಹಾಸನ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನಗಳ ಬಗ್ಗೆ ಶ್ವೇತಪತ್ರವನ್ನು ಹೊರಡಿಸಲಿ. ನಮ್ಮ ಸರ್ಕಾರ ಹಾಗೂ ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರವಿದ್ದಾಗ ಜಿಲ್ಲೆಗೆ ತಂದಿರುವ ಅನುದಾನದಿಂದ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡಿರುವುದಾಗಿ ಕಾಂಗ್ರೆಸ್ಸಿನವರು ಬಿಂಬಿಸಿಕೊಂಡು ಉದ್ಘಾಟನೆಗಳನ್ನು ಮಾಡಿರುವುದು ಖಂಡನೀಯ. ರಾಜ್ಯದ ಅಭಿವೃದ್ಧಿಯು ಹತ್ತು ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ಕೇವಲ ರಸ್ತೆಗಳ ಗುಂಡಿಯನ್ನು ಮುಚ್ಚುವ ಕಾರ್ಯದಲ್ಲಿ ಮಾತ್ರ ತೊಡಗಿಕೊಂಡಿದ್ದು, ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ನ ಶಕ್ತಿ ಏನು ಎಂಬುದನ್ನು ಜ. 24 ರಂದು ನಡೆಯುವ ಸಮಾವೇಶದ ಮೂಲಕ ತಕ್ಕ ಉತ್ತರ ನೀಡಬೇಕು ಎಂದರು.
ಮಾಜಿ ಸಚಿವ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಹಾಸನದಲ್ಲಿ ನಡೆಯುವ ಜೆಡಿಎಸ್ ಬೃಹತ್ ಸಮಾವೇಶಕ್ಕೆ ನಮ್ಮ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಅವರು ಭಾಗವಹಿಸುತ್ತಿದ್ದಾರೆ. ಆಲೂರು ತಾಲ್ಲೂಕಿನಿಂದ 5,000ಕ್ಕೂ ಹೆಚ್ಚು ಜನರನ್ನು ಈ ಸಮಾವೇಶಕ್ಕೆ ಬರುವಂತೆ ಎಲ್ಲಾ ವ್ಯವಸ್ಥೆ ಮಾಡಬೇಕು. 2023ರ ಚುನಾವಣೆಯಲ್ಲಿ ನಮ್ಮ ಪಕ್ಷ ಕೆಲವೆ ಮತಗಳಿಂದ ಸೋಲನ್ನು ಅನುಭವಿಸಿದೆ. 2028ರ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಮರಳಿ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಇದರಲ್ಲಿ ಯಾವುದೇ ಸಂದೇಹ ಬೇಡ ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೆ.ಎಸ್. ಮಂಜೇಗೌಡ, ಜಿ.ಪಂ. ಮಾಜಿ ಸದಸ್ಯೆ ಸಂಚಲ ಕುಮಾರಸ್ವಾಮಿ, ಪ.ಪಂ. ಮಾಜಿ ಅಧ್ಯಕ್ಷ ಡಿ.ಎಸ್. ಜಯಣ್ಣ, ಧರ್ಮರಾಜು, ಹಾಸನ ಹಾಲು ಒಕ್ಕೂಟ ನಿರ್ದೇಶಕ ಪಿ.ಎಲ್. ನಿಂಗರಾಜು, ತಾ.ಪಂ. ಮಾಜಿ ಸದಸ್ಯ ನಟರಾಜು ನಾಕಲಗೂಡು, ಸಿ.ವಿ. ಲಿಂಗರಾಜು, ಮುಖಂಡರಾದ ಬಿ.ಸಿ. ಶಂಕರಾಚಾರ್, ಕದಾಳು ರಾಜಪ್ಪಗೌಡ, ಗಂಗಾಧರಪ್ಪ, ಗೇಕರವಳ್ಳಿ ಬಸವರಾಜು, ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.