ADVERTISEMENT

ಒತ್ತಾಯದಿಂದ ಭೂಮಿ ಬರೆಸಿಕೊಂಡು ರೇವಣ್ಣ ಕುಟುಂಬ; ಪ್ರಜ್ವಲ್ ಮಾಜಿ ಕಾರು ಚಾಲಕ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 15:53 IST
Last Updated 6 ಜನವರಿ 2024, 15:53 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ‘ಜಿಲ್ಲೆಯಲ್ಲಿ ಪೊಲೀಸರಿಂದ ಬಡವರಿಗೆ ನ್ಯಾಯವೂ ಸಿಗುವುದಿಲ್ಲ, ರಕ್ಷಣೆಯೂ ಸಿಗುತ್ತಿಲ್ಲ’ ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ ಮತ್ತು ಶಾಸಕ ಎಚ್.ಡಿ.ರೇವಣ್ಣ ಅವರು ನನಗೆ ಹಾಗೂ ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದು, ನನ್ನನ್ನು ಮತ್ತು ನನ್ನ ಪತ್ನಿಯನ್ನು ಪೊಲೀಸರ ಸಹಾಯದಿಂದ ಅಕ್ರಮವಾಗಿ ಕೂಡಿ ಹಾಕಿ, ನನಗೆ ಸೇರಿದ 13 ಎಕರೆ ಭೂಮಿಯನ್ನು ಒತ್ತಾಯದಿಂದ ಬರೆಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ನನಗೆ ಬೆದರಿಕೆಯೊಡ್ಡಿ ನನ್ನ ಖಾಲಿ ಚೆಕ್‌ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ನನ್ನ ಪತ್ನಿ ಮೇಲೆ ನಡೆದಿರುವ ಹಲ್ಲೆಯಿಂದ ಗರ್ಭಪಾತವಾಗಿದೆ, ಭವಾನಿ ರೇವಣ್ಣ ಅವರೇ ನನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ನನಗೆ ನ್ಯಾಯ ದೊರಕಿಸಿಕೊಡಿ ಎಂದರೂ, ಪೊಲೀಸರು ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ‌’ ಎಂದು ದೂರಿದರು.

ADVERTISEMENT

’ನನ್ನ ಹಾಗೂ ನನ್ನ ಪತ್ನಿಯನ್ನು ಎರಡು ದಿನಗಳ ಕಾಲ ಹೊಳೆನರಸೀಪುರ ಪ್ರವಾಸಿ ಮಂದಿರದಲ್ಲಿ ಅಕ್ರಮವಾಗಿ ಪೊಲೀಸರೇ ಬೆಂಗಾವಲಿನಲ್ಲಿ ನಿಂತು ಬಂಧಿಸಿಟ್ಟಿದ್ದರು. ನನ್ನ ಪತ್ನಿಯನ್ನು ಕೂಡಿ ಹಾಕಿ, ನನ್ನನ್ನು ಮಾತ್ರ ಉಪ ನೋಂದಣಾಧಿಕಾರಿ ಕಚೇರಿಗೆ ಕರೆದುಕೊಂಡು ಬಂದು ಜಮೀನು ಬರೆಸಿಕೊಂಡಿದ್ದಾರೆ’ ಎಂದು ದೂರಿದರು.

‘ನಾನು ಪೊಲೀಸರಿಗೆ ದೂರು ಕೊಡಲು ಹೋದರೂ ಸ್ಪಂದಿಸಲಿಲ್ಲ. ಹಾಗಾಗಿ ಬೇರೆ ದಾರಿ ಇಲ್ಲದೇ ಐಜಿ, ಡಿಜಿಗೆ ದೂರು ನೀಡಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ವಿಚಾರಣೆ ಹಂತದಲ್ಲಿದೆ’ ತಿಳಿಸಿದರು.

‘ಗರ್ಭಪಾತದ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನಿಖೆ ನಡೆಸುತ್ತಿದೆ. ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಹಾಸನ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗುತ್ತಿಲ್ಲ ಎಂದು ದೂರಿದ ಕಾರ್ತಿಕ್ , ರಾಜ್ಯ ಪೊಲೀಸ್ ಮಹಾ ನಿರ್ದೇಶ ಕರಿಗೆ ದೂರು ನೀಡಿದ ಬಳಿಕ ಈ ಸಂಬಂಧ ಚನ್ನರಾಯಪಟ್ಟಣ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಿದ್ದು, ಅಲ್ಲಿಯೂ ಅನ್ಯಾಯವಾಗಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.