ADVERTISEMENT

ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ: ನಾಗರಾಜ್‌ ‘ಹ್ಯಾಟ್ರಿಕ್‌’

ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ– ಉಪಾಧ್ಯಕ್ಷರ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:08 IST
Last Updated 30 ಆಗಸ್ಟ್ 2025, 5:08 IST
ಹಾಸನದ ಎಚ್‌.ಡಿ.ಸಿ.ಸಿ. ಬ್ಯಾಂಕ್‌ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್‌, ಉಪಾಧ್ಯಕ್ಷ ಶೇಖರಪ್ಪ ಅವರನ್ನು ನಿರ್ದೇಶಕರು ಅಭಿನಂದಿಸಿದರು.
ಹಾಸನದ ಎಚ್‌.ಡಿ.ಸಿ.ಸಿ. ಬ್ಯಾಂಕ್‌ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್‌, ಉಪಾಧ್ಯಕ್ಷ ಶೇಖರಪ್ಪ ಅವರನ್ನು ನಿರ್ದೇಶಕರು ಅಭಿನಂದಿಸಿದರು.   

ಹಾಸನ: ಇಲ್ಲಿನ ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನೂತನ ಅಧ್ಯಕ್ಷರಾಗಿ ಸೋಮನಹಳ್ಳಿ ನಾಗರಾಜ್ ಪುನರಾಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಅರಸೀಕೆರೆಯ ಶೇಖರಪ್ಪ ಅವಿರೋಧವಾಗಿ ಆಯ್ಕೆಯಾದರು.

ಬ್ಯಾಂಕಿನ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ 13 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಶುಕ್ರವಾರ ನಡೆದ ಅಧ್ಯಕ್ಷ– ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದು, ಚುನಾವಣಾಧಿಕಾರಿಯಾಗಿದ್ದ ಮಾರುತಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಸೋಮನಹಳ್ಳಿ ನಾಗರಾಜ್ ಅವರು ಸತತ ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪ್ರಥಮ ಬಾರಿಗೆ ಅರಸೀಕೆರೆಯ ಶೇಖರಪ್ಪ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.

ADVERTISEMENT

ನಂತರ ಮಾತನಾಡಿದ ಸೋಮನಹಳ್ಳಿ ನಾಗರಾಜ್, ‘ಜೆಡಿಎಸ್‌ ನಾಯಕ ಎಚ್.ಡಿ. ರೇವಣ್ಣ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಸ್ವರೂಪ್ ಪ್ರಕಾಶ್, ವಿಧಾನ ಪರಿಷತ್‌ ಸದಸ್ಯ ಡಾ.ಸೂರಜ್ ರೇವಣ್ಣ ಸೇರಿದಂತೆ ಸಹಕಾರಿ ಮಿತ್ರರು ನನ್ನನ್ನು ಆಯ್ಕೆ ಮಾಡಲು ಸಹಕಾರ ನೀಡಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ’ ತಿಳಿಸಿದರು.

‘ಸತತ ಮೂರನೇ ಬಾರಿ ನನ್ನನ್ನು ಆಯ್ಕೆ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. 13 ನಿರ್ದೇಶಕರ ಆಯ್ಕೆಯಲ್ಲಿ ಎಲ್ಲರೂ ಒಟ್ಟಾಗಿ ಸಹಕಾರ ನೀಡಿದ್ದು, ಮುಂದಿನ ದಿನಗಳಲ್ಲಿ ಬ್ಯಾಂಕ್‌ ಅನ್ನು ಉನ್ನತ ಮಟ್ಟಕ್ಕೆ ಬೆಳೆಸಲು ಸಹಕಾರ ನೀಡಿದಂತಾಗಿದೆ’ ಎಂದರು.

‘ಈ ಹುದ್ದೆ ಸಿಂಹಾಸನ, ಸುಖದ ಸುಪ್ಪತ್ತಿಗೆಯಲ್ಲ. ಮುಳ್ಳಿನ ಹಾಸಿಗೆಯಾಗಿದೆ ಎಂದೇ ಕಾರ್ಯ ನಿರ್ವಹಿಸಬೇಕಾಗಿದೆ. ಈ ಹಿಂದೆ ನಬಾರ್ಡ್‌ನಿಂದ ಬರುತ್ತಿದ್ದ ಸಾಲದ ಮೊತ್ತ ಕಡಿಮೆಯಾಗಿದೆ. ಶೇ 10ರಷ್ಟು ಮಾತ್ರ ಸಾಲ ಒದಗಿಸಲಾಗುತ್ತಿದ್ದು, ಆರ್ಥಿಕವಾಗಿ ಕಷ್ಟವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ನೆರವಿನಿಂದ ಆರ್ಥಿಕವಾಗಿ ಸದೃಢವಾಗಿ ಬ್ಯಾಂಕ್‌ ಅನ್ನು ಮುನ್ನಡೆಸಲು ಶ್ರಮಿಸುವುದಾಗಿ’ ತಿಳಿಸಿದರು.

ಉಪಾಧ್ಯಕ್ಷ ಶೇಖರಪ್ಪ ಮಾತನಾಡಿ, ‘ಇದೇ ಮೊದಲ ಬಾರಿಗೆ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದು, ಸಹಕಾರ ನೀಡಿದ ಜೆಡಿಎಸ್ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿಯವನಾಗಿದ್ದು, ಸಹಕಾರ ಕ್ಷೇತ್ರದ ಬೆಳವಣಿಗೆಗೆ ಹಾಗೂ ಜಿಲ್ಲೆಯ ರೈತರ ಅಭಿವೃದ್ಧಿಗೆ ಪೂರಕ ಕೆಲಸ ಮಾಡುವುದಾಗಿ’ ಹೇಳಿದರು.

ಈ ಸಂದರ್ಭದಲ್ಲಿ ಎಂ ಎಲ್ ಸಿ ಸೂರಜ್ ರೇವಣ್ಣ, ನಿರ್ದೇಶಕರಾದ ಜಯರಾಮ್, ಸತೀಶ್, ಸೇರದಂತೆ ಇತರರು ಹಾಜರಿದ್ದರು.

ಸೋಮನಹಳ್ಳಿ ನಾಗರಾಜ ಕಾರ್ಯವೈಖರಿ ಮೆಚ್ಚುವಂಥದ್ದು. ರೈತರಿಗೆ ಸಾಲ ಸೌಲಭ್ಯ ಸೇರಿ ನಬಾರ್ಡ್‌ನಿಂದ ಬರುವ ಅಲ್ಪ ಮೊತ್ತದಲ್ಲಿಯೇ ಉತ್ತಮವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದು ಜಿಲ್ಲೆಯ ರೈತರನ್ನು ಉಳಿಸುವ ವಿಶ್ವಾಸವಿದೆ
ಸ್ವರೂಪ್ ಪ್ರಕಾಶ್ ಶಾಸಕ

ದೇವೇಗೌಡರಿಂದ ಗಟ್ಟಿ ತಳಹದಿ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಇಷ್ಟು ಉನ್ನತಮಟ್ಟಕ್ಕೆ ಬೆಳೆಯಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಕಿಕೊಟ್ಟ ತಳಹದಿಗೆ ಕಾರಣ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ದೇವೇಗೌಡರು ಲೋಕೋಪಯೋಗಿ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಬ್ಯಾಂಕಿಗೆ ₹ 3 ಕೋಟಿ ಸಹಾಯ ನೆರವಾಯಿತು ಎಂದು ಬ್ಯಾಂಕಿನ ನಿರ್ದೇಶಕರೂ ಆದ ಶಾಸಕ ಸಿ.ಎನ್‌. ಬಾಲಕೃಷ್ಣ ಹೇಳಿದರು. ಪಟೇಲ್ ಶಿವರಾಮ್ ಅವರ ಅವಧಿಯಲ್ಲಿ ₹ 150 ಕೋಟಿ ಠೇವಣಿಯೊಂದಿಗೆ ಆರಂಭವಾದ ಬ್ಯಾಂಕ್‌ ಇಂದು ₹ 600 ಕೋಟಿ ಸಂಗ್ರಹದವರೆಗೂ ಬ್ಯಾಂಕ್ ಮುನ್ನಡೆದಿದೆ. ರೈತರಿಗೆ ₹ 1.30 ಲಕ್ಷದವರೆಗೆ ಸಾಲದ ಸೌಲಭ್ಯ ಒದಗಿಸಲಾಗುತ್ತಿದೆ. ಸೋಮನಹಳ್ಳಿ ನಾಗರಾಜ ಇದುವರೆಗೂ ಉತ್ತಮ ಆಡಳಿತ ನೀಡಿದ್ದು ಮುಂದೆಯೂ ಬ್ಯಾಂಕಿನ ಆರ್ಥಿಕ ಸದೃಢತೆಗೆ ಕೊಡುಗೆ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ಬ್ಯಾಂಕಿಗೆ ಹೊಸದಾಗಿ ನೇಮಕಾತಿ ಆಗಬೇಕಿದೆ. ರೈತರಿಗೆ ಸಾಲ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.