ADVERTISEMENT

ಹಾಸನ: ಎಲ್ಲಕ್ಕಿಂತ ಆರೋಗ್ಯ ಭಾಗ್ಯ ದೊಡ್ಡದು

ದೇವಾಂಗ ಸ್ವಾಸ್ಥ್ಯ: 500 ಜನರ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 4:53 IST
Last Updated 4 ಮಾರ್ಚ್ 2023, 4:53 IST
ಹಾಸನದಲ್ಲಿ ಏರ್ಪಡಿಸಿದ್ದ ದೇವಾಂಗ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣೆ ಮಾಡಲಾಯಿತು.
ಹಾಸನದಲ್ಲಿ ಏರ್ಪಡಿಸಿದ್ದ ದೇವಾಂಗ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣೆ ಮಾಡಲಾಯಿತು.   

ಹಾಸನ:ದೇವಾಂಗ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಹಾಸನಾಂಬ ದೇವಾಲಯದ ಸಮೀಪದ ಚೌಡೇಶ್ವರಿ ಬೀದಿಯಲ್ಲಿರುವ ರಾಮ ಮಂದಿರದಲ್ಲಿ ದೇವಾಂಗ ಸ್ವಾಸ್ಥ್ಯ ಕಾರ್ಯಕ್ರಮದಡಿ 500ಕ್ಕೂ ಹೆಚ್ಚು ದೇವಾಂಗ ಸಮಾಜದವರ ಆರೋಗ್ಯ ತಪಾಸಣೆ ಮಾಡಲಾಯಿತು.

ಉದ್ಘಾಟಿಸಿದ ಹಿಮ್ಸ್ ಸಹ ಪ್ರಾಧ್ಯಾಪಕಡಾ.ಬಿ.ಆರ್. ಹಾಲೇಶ್ ಮಾತನಾಡಿ, ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ಹಿರಿದು. ಕರಿದ ಪದಾರ್ಥಗಳ ಸೇವನೆ, ವ್ಯಾಯಾಮರಹಿತ ಬದುಕು, ಒತ್ತಡದ ಜೀವನದಿಂದಾಗಿ ಚಿಕ್ಕ ವಯಸ್ಸಿನಲ್ಲಿ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇವುಗಳನ್ನು ತಪಾಸಣೆ ಮೂಲಕ ಮೊದಲೇ ಕಂಡುಕೊಂಡರೆ ಆಹಾರದ ನಿಯಂತ್ರಣ ಮತ್ತು ಸರಳ ವ್ಯಾಯಾಮದ ಮೂಲಕ ನಿಯಂತ್ರಿಸಬಹುದು ಎಂದರು.

ಹಾಸನ ತಾಲ್ಲೂಕು ವೈದ್ಯಾಧಿಕಾರಿ ಡಾ. ವಿಜಯ್ ಮಾತನಾಡಿ, 460ಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡು ರಕ್ತ ಪರೀಕ್ಷೆ, ರಕ್ತದ ಒತ್ತಡದ ಪರೀಕ್ಷೆ ಮಾಡಿಸಿಕೊಂಡಿದ್ದು, 200 ಹೆಚ್ಚು ಮಂದಿಗೆಇಸಿಜಿ, 150ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಪರೀಕ್ಷೆ ಮಾಡಲಾಗಿದೆ. 33 ಯುವಕರು ರಕ್ತ ದಾನ ಮಾಡಿದ್ದಾರೆ. ಲಕ್ಷಕ್ಕೂ ಹೆಚ್ಚು ಮೌಲ್ಯದ ಔಷಧಿಯನ್ನು ವಿತರಿಸಲಾಗಿದೆ ಎಂದರು.

ADVERTISEMENT

ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್, ಹಾಸನದ ಹಿರಿಯ ತಜ್ಞ ವೈದ್ಯರಾದ ಡಾ.ಹಾಲೇಶ್, ಡಾ.ವಿಜಯ್, ಡಾ.ರಾಜೇಶ್ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆದಿದೆ. ಜಿಲ್ಲೆಯ 20 ವರ್ಷಕ್ಕೆ ಮೇಲಿನ ದೇವಾಂಗ ಸಮಾಜದವರು ಆರೋಗ್ಯ ತಪಾಸಣಾ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಹೃದಯ ಸಂಬಂಧಿ ಕಾಯಿಲೆ ತಪಾಸಣೆ, ಇಸಿಜಿ, ಮಧುಮೇಹ ತಪಾಸಣೆ, ರಕ್ತದ ಒತ್ತಡ, ಕಣ್ಣಿನ ಪರೀಕ್ಷೆ ಹಾಗೂ ಚಿಕಿತ್ಸೆ, ರಕ್ತದ ಗುಂಪಿನ ಪರೀಕ್ಷೆ ಹಾಗೂ ಆರೋಗ್ಯ ತಪಾಸಣೆಯನ್ನು ನುರಿತ ತಜ್ಞ ವೈದ್ಯರಿಂದ ಮಾಡಿಸಲಾಗಿದೆ. ಕಣ್ಣು, ಹೃದಯ ಹಾಗೂ ರಕ್ತ ಪರೀಕ್ಷೆಯ ನಂತರ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಸಂಘದ ವತಿಯಿಂದ ಅದನ್ನು ಮಾಡಿಸಿಕೊಡಲಾಗುವುದು ಎಂದು ವಿವರಿಸಿದರು.

ವೈದ್ಯರಾದ ಡಾ.ಸಂದೀಪ್, ಡಾ.ಸುಹಾಸ್, ಡಾ. ಸಚಿನ್, ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಚಾಲಕ ಜಿ.ಆರ್. ಮಂಜೇಶ್, ದೇವಾಂಗ ನೌಕರರ ಸಂಘದ ಗೌರವಾಧ್ಯಕ್ಷ ಜಿ.ಎಸ್. ಸತೀಶ್, ಜಿಲ್ಲಾ ದೇವಾಂಗ ನೌಕರರ ಸಂಘದ ಅಧ್ಯಕ್ಷ ಬಿ.ಸೋಮಶೇಖರ್, ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಶಂಕರ ಶೆಟ್ಟಿ, ದೇವಲ ಭವನ ರಾಮಮಂದಿರದ ಅಧ್ಯಕ್ಷ ಜ್ಞಾನೇಶ್ ಹಾಗೂ ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರು, ಸಂಘದ ಪದಾಧಿಕಾರಿಗಳು, ಸ್ವಯಂಸೇವಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.