ADVERTISEMENT

ಹಾಸನ | ಆಶಾ ಕಾರ್ಯಕರ್ತೆಯರ ಮುಷ್ಕರ; ಆರೋಗ್ಯ ಸಮೀಕ್ಷೆಗೆ ಹಿನ್ನಡೆ

ಕೊರೊನಾ ವಾರಿಯರ್‌ಗಳಾದ ಆಶಾ ಕಾರ್ಯಕರ್ತೆಯರ ಮುಷ್ಕರ

ಕೆ.ಎಸ್.ಸುನಿಲ್
Published 19 ಜುಲೈ 2020, 16:08 IST
Last Updated 19 ಜುಲೈ 2020, 16:08 IST
ಹಾಸನದಲ್ಲಿ ಆಶಾ ಕಾರ್ಯಕರ್ತೆರು ಪ್ರತಿಭಟನೆ ನಡೆಸಿದರು.
ಹಾಸನದಲ್ಲಿ ಆಶಾ ಕಾರ್ಯಕರ್ತೆರು ಪ್ರತಿಭಟನೆ ನಡೆಸಿದರು.   

ಹಾಸನ: ಕೊರೊನಾ ವಾರಿಯರ್‌ಗಳಾದ ಆಶಾ ಕಾರ್ಯಕರ್ತೆಯರು ಹತ್ತು ದಿನಗಳಿಂದ ನಡೆಸುತ್ತಿರುವ ಮುಷ್ಕರದಿಂದಾಗಿ ಜಿಲ್ಲೆಯಲ್ಲಿ ಮನೆ ಮನೆ ಆರೋಗ್ಯ ಸಮೀಕ್ಷೆಗೆ ಹಿನ್ನಡೆಯಾಗಿದೆ.

ಕೊರೊನಾ ಸೋಂಕಿನ ಲಕ್ಷಣಗಳಿದ್ದರೆ ಗುರುತಿಸಿ ತಪಾಸಣೆಗೆ ಒಳಪಡಿಸುವುದು ಹಾಗೂ ಚಿಕಿತ್ಸೆಗೆ ದಾಖಲಿಸುವ ನಿಟ್ಟಿನಲ್ಲಿ ಸಮೀಕ್ಷೆ ಮಹತ್ವದ್ದಾಗಿದೆ. ತೀವ್ರ ಉಸಿರಾಟದ ತೊಂದರೆ ಅಥವಾ ಶೀತ ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ ಕಂಡು ಬಂದರೆ ಅಂತಹವರ ಮೇಲೆ ಆಶಾ ಕಾರ್ಯಕರ್ತೆಯರು ವಿಶೇಷ ನಿಗಾ ವಹಿಸುತ್ತಿದ್ದರು.

ಕೋವಿಡ್‌ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಮಾರ್ಚ್‌ 22 ರಿಂದ ಆರೋಗ್ಯ ಸಮೀಕ್ಷೆ
ಆರಂಭಿಸಲಾಯಿತು. ಮನೆ ಮನೆ ಭೇಟಿಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ವಯಂ ಸೇವಕರನ್ನು ನಿಯೋಜಿಸಿತ್ತು. ಈವರೆಗೆ ಮನೆ ಮನೆ ಭೇಟಿ ಕಾರ್ಯ ಐದು ಬಾರಿ ಪೂರ್ಣಗೊಂಡಿದೆ. ಎಂಟು ತಾಲ್ಲೂಕುಗಳಿಂದ ಈವರೆಗೆ 18 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ADVERTISEMENT

ಜಿಲ್ಲಾದಾದ್ಯಂತ ಮಂಜೂರಾಗಿರುವ 1498 ಆಶಾ ಕಾರ್ಯಕರ್ತೆಯರ ಹುದ್ದೆ ಪೈಕಿ 458 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿಯೊಬ್ಬರೂ ಒಂದು ಮನೆಗೆ ಐದು ಬಾರಿ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದಾರೆ.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹತ್ತು ದಿನಗಳಿಂದ ನಡೆಸುತ್ತಿರುವ ಮುಷ್ಕರದಿಂದಾಗಿ ಆರನೇ ಸಮೀಕ್ಷೆಗೆ ಹಿನ್ನಡೆಯಾಗಿದ್ದು, ಆಶಾ ಕಾರ್ಯಕರ್ತೆಯರ ಗೈರು ಹಾಜರಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಸ್ವಯಂ ಸೇವಕರು ಕಾರ್ಯ ನಿರ್ವಹಿಸುವಂತಾಗಿದೆ.

ಮನೆ ಮನೆಗೆ ಭೇಟಿ ನೀಡುತ್ತಿರುವ ಇಲಾಖೆ ಸಿಬ್ಬಂದಿ, 60 ವರ್ಷದ ವ್ಯಕ್ತಿ, ಹತ್ತು ವರ್ಷದೊಳಗಿನ ಮಕ್ಕಳು, ಗರ್ಭಿಣಿ,
ಬಾಣಂತಿಯರ ಆರೋಗ್ಯ ಪರಿಶೀಲಿಸುತ್ತಿದ್ದಾರೆ. ಹೊರ ಜಿಲ್ಲೆ ಅಥವಾ ರಾಜ್ಯದಿಂದ ಬಂದವರ ಮಾಹಿತಿ ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸುತ್ತಾರೆ. ಅಕ್ರಮವಾಗಿ ಗ್ರಾಮ ಪ್ರವೇಶಿಸಿಸುವರ ಕುರಿತು ಗ್ರಾಮ ಪಂಚಾಯಿತಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 9313 ಗರ್ಭಿಣಿಯರಿದ್ದು, ಆರನೇ ಸುತ್ತಿನ ಸಮೀಕ್ಷೆಯಲ್ಲಿ 2855 ಜನರನ್ನು ಭೇಟಿ ಮಾಡಲಾಗಿದೆ.
3923 ಬಾಣಂತಿಯರಿದ್ದು, 1464 ಮಹಿಳೆಯರನ್ನು ಭೇಟಿಯಾಗಿ ಆರೋಗ್ಯ ವಿಚಾರಣೆ ನಡೆಸಲಾಗಿದೆ. 781 ಕ್ಷಯ
ರೋಗಿಗಳನ್ನು ಭೇಟಿಯಾಗಿ ಇತರ ಕಾಯಿಲೆಗಳ ಪರೀಕ್ಷೆ ನಡೆಸಲಾಗಿದೆ. 4209 ಎಚ್‌ಐವಿ ಪೀಡಿತರಿದ್ದು, ಯಾರಿಗೂ
ಕೋವಿಡ್‌ ರೋಗ ಕಾಣಿಸಿಕೊಂಡಿಲ್ಲ.

‘ಕೋವಿಡ್‌ 19 ಪ್ರಕರಣ ಪತ್ತೆಗೂ ಮೊದಲೇ ಮನೆ ಮನೆ ಸಮೀಕ್ಷೆ ಆರಂಭಿಸಲಾಯಿತು. ಇದುವರೆಗೆ ಐದು ಸುತ್ತಿನ ಭೇಟಿ ಯಶಸ್ವಿಯಾಗಿದೆ. ಆರನೇ ಸಮೀಕ್ಷೆ ಅರ್ಧ ಪೂರ್ಣಗೊಂಡಿದೆ. ಆಶಾ ಕಾರ್ಯಕರ್ತೆಯರ ಮುಷ್ಕರದಿಂದಾಗಿ ಸ್ವಲ್ಪ
ಹಿನ್ನಡೆಯಾಗಿದೆ. ಇದು ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಕೆಲವರು ವಾಪಸ್‌ ಬಂದು ಕೆಲಸ ಮಾಡುತ್ತಿದ್ದಾರೆ. ಪೂರ್ಣ
ಪ್ರಮಾಣದಲ್ಲಿ ಆರೋಗ್ಯ ಸಿಬ್ಬಂದಿ ಸಮೀಕ್ಷೆ ಕಾರ್ಯದಲ್ಲಿ ನಿರತರಾಗಿದ್ದಾರೆ’ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿ ಡಾ.ಸತೀಶ್‌ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.