ಹೆತ್ತೂರು: ಮಲೆನಾಡು ಹೆತ್ತೂರು, ಯಸಳೂರು ಭಾಗದಲ್ಲಿ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮುಂಗಾರು ಮಳೆ, ಎರಡು ದಿನದಿಂದ ಜೋರಾಗಿದೆ. ನಸುಕಿನಿಂದಲೂ ಧಾರಾಕಾರವಾಗಿ ಸುರಿದ ಮಳೆ, ಮಧ್ಯಾಹ್ನ ಕೆಲಕಾಲ ಬಿಡುವು ನೀಡಿತ್ತು. ಮಧ್ಯಾಹ್ನದ ಬಳಿಕ ಪ್ರಾರಂಭವಾದ ಮಳೆ ಬಿಡುವಿಲ್ಲದೆ ಸುರಿಯುತ್ತಿದೆ.
ನಿರಂತರ ಮಳೆಯಿಂದ ಹೇಮಾವತಿ ಉಪನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಹೇಮಾವತಿ ಉಪ ನದಿಯು ಐಗೂರು ಬಳಿ ಗದ್ದೆ ಬಯಲಿಗೆ ವ್ಯಾಪಿಸಿದ್ದು, ಮಳೆ ಹೆಚ್ಚಾದರೆ ಯಡಕೇರಿ- ಹೆತ್ತೂರು ರಸ್ತೆ ಸಂಪರ್ಕಿಸುವ ಸೇತುವೆ ಮೇಲೆ ನೀರು ಹರಿಯುವ ಆತಂಕ ನಿರ್ಮಾಣವಾಗಿದೆ.
ಮಳೆಯೊಂದಿಗೆ ಮಂಜು ಕವಿದ ವಾತಾವರಣ ನಿರ್ಮಾಣವಾಗಿದ್ದು, ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡಿದರು. ಬಾಣಗೇರಿ ಗ್ರಾಮದ ಬಳಿ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು.
ಪಶ್ಚಿಮ ಘಟ್ಟದ ಅಂಚಿನ ಕೆಲವು ಕಡೆಗಳಲ್ಲಿ ಭೀಕರ ಮಳೆ ಭೀತಿ ಹುಟ್ಟಿಸಿದೆ. ಹಳ್ಳ-ಕೊಳ್ಳಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಬಹುತೇಕ ಕಡೆಗಳಲ್ಲಿ ಜನ-ಜಾನುವಾರು ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಾತ್ರಿ–ಹಗಲೆನ್ನದೇ ನಿರಂತರವಾಗಿ ಸುರಿಯುತ್ತಿರುವ ಮಳೆ– ಗಾಳಿಗೆ ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವು ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
ಚಳಿ, ಗಾಳಿ ನಡುವೆ ಮೋಡ ಕವಿದ ವಾತಾವರಣ ಮುಂದುವರಿದಿದೆ. 24 ಗಂಟೆಯಲ್ಲಿ ಹೋಬಳಿಯ ಅತ್ತಿಹಳ್ಳಿ ಗ್ರಾಮದಲ್ಲಿ 17.25 ಸೆಂ.ಮೀ. ಮಳೆ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.