ಹಾಸನ: ನನ್ನ ಅಧಿಕಾರವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಮೂಲಕ ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಮಹಾನಗರ ಪಾಲಿಕೆಯ ಮೇಯರ್ ಎಂ. ಚಂದ್ರೇಗೌಡ ತಿಳಿಸಿದರು.
ಶುಕ್ರವಾರ ನಗರದ ಕಾಳಿಕಾಂಬ– ಕಮಠೇಶ್ವರ ದೇವಾಲಯದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಆಶ್ರಯದಲ್ಲಿ ನೂತನ ಮೇಯರ್, ಉಪ ಮೇಯರ್ ಮತ್ತು ಮಹಾನಗರಪಾಲಿಕೆ ಸದಸ್ಯರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಮಾಜದ ಕುಂದು ಕೊರತೆಗಳಿಗೆ ತಕ್ಷಣವೇ ಸ್ಪಂದಿಸಲಾಗುವುದು. ಯಾವುದೇ ಸಮಸ್ಯೆ ಇದ್ದರೂ, ತಮ್ಮನ್ನು ಸಂಪರ್ಕಿಸಿದಲ್ಲಿ ಪರಿಹರಿಸಲಾಗುವುದು ಎಂದರು.
ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ. ಹರೀಶ್ ಮಾತನಾಡಿ, ಜಿಲ್ಲೆ ಶಿಲ್ಪಕಲೆಗಳ ತವರೂರೆಂದು ಖ್ಯಾತಿ ಗಳಿಸಲು ಕಾರಣರಾದ ಬೇಲೂರು, ಹಳೇಬೀಡು ದೇಗುಲಗಳ ನಿರ್ಮಾಣ ಮಾಡಿರುವ ಜಕಣಾಚಾರ್ಯರ ಹೆಸರನ್ನು ಹಾಸನ ನಗರದ ಪ್ರಮುಖ ವೃತ್ತವೊಂದಕ್ಕೆ ಇಡಬೇಕು ಎಂದು ಮನವಿ ಮಾಡಿದರು.
ಉಪ ಮೇಯರ್ ಎನ್. ಹೇಮಲತಾ ಕಮಲ್ ಕುಮಾರ್, ನಗರಪಾಲಿಕೆ ಸದಸ್ಯೆ ಜಯಲಕ್ಷ್ಮಿ, ಅವರ ಪತಿ ಪುನೀತ್, ಹಾಸನ ಸಿಟಿ ಕ್ಲಬ್ ನಿರ್ದೇಶಕ ಎಚ್.ಆರ್. ಪ್ರಸನ್ನಕುಮಾರ್, ವಾರದ ವಿಶೇಷ ಪೂಜಾ ಸೇವಾರ್ಥದಾರರಾದ ಪಲ್ಲವಿ ಎಂ.ಸಿ. ಮತ್ತು ಕೇಶವ ಬಿ.ಡಿ. ದಂಪತಿಯನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಬಿ. ಕುಮಾರಾಚಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಉಪಾಧ್ಯಕ್ಷ ಎ.ಸಿ. ನಾರಾಯಣ್, ಖಜಾಂಚಿ ಕೆ.ಎಸ್. ಜಗದೀಶ್, ನಿರ್ದೇಶಕರಾದ ಜಿ.ಎಸ್. ಜಯರಾಜ್, ಅನಿಲ ಪದ್ಮನಾಭ, ಕೆ.ಟಿ. ಯೋಗೇಶ್, ತಾಲ್ಲೂಕು ಘಟಕದ ಉಪಾಧ್ಯಕ್ಷ ಎ.ಬ್ಯಾಟರಂಗಾಚಾರ್, ಪ್ರಧಾನ ಕಾರ್ಯದರ್ಶಿ ಟಿ. ಕೇಶವಪ್ರಸಾದ್, ಖಜಾಂಚಿ ಬಿ. ಲೋಕೇಶ್, ನಿರ್ದೇಶಕರಾದ ಎಚ್.ಎಸ್. ಆನಂದ್, ಎಂ.ಟಿ. ಸುರೇಶ್, ಪಿ.ಟಿ. ಗೋಪಾಲ್, ಎಚ್.ಕೆ. ಶ್ರೀಕಂಠಮೂರ್ತಿ, ಸುದೇವನ್, ಮಾಜಿ ಅಧ್ಯಕ್ಷ ಜಿ.ಆರ್. ತಿಮ್ಮಾಚಾರ್, ವಿಶ್ವಕರ್ಮ ಯುವಕ ಸಮಾಜದ ಕಾರ್ಯದರ್ಶಿ ಟಿ.ಎನ್. ಗಿರೀಶ್, ಕಾಳಿಕಾಂಬ ಸೊಸೈಟಿಯ ಅಧ್ಯಕ್ಷ ಪ್ರಭಾಕರ್, ಕಲಾಸಂಘದ ಅಧ್ಯಕ್ಷ ಎಂ. ಕೆ. ರಾಜಾಚಾರ್, ಕಾರ್ಯದರ್ಶಿ ಚಂದ್ರು ಮತ್ತು ಯು. ಎಸ್. ಅಯ್ಯಣ್ಣಚಾರ್ ಸೇರಿದಂತೆ ಸಮಾಜದ ಪ್ರಮುಖರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.