ADVERTISEMENT

ಹೇಮಾವತಿ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಅಕ್ರಮ: ತನಿಖಾ ವರದಿ ನೀಡಿದ ಎಸಿ ವರ್ಗ

ಭ್ರಷ್ಟ ಅಧಿಕಾರಿಗಳ ಅಮಾನತಿಗೆ ರೇವಣ್ಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 12:42 IST
Last Updated 16 ಅಕ್ಟೋಬರ್ 2019, 12:42 IST
ಗೊರೂರು ಜಲಾಶಯ
ಗೊರೂರು ಜಲಾಶಯ   

ಹಾಸನ: 'ಹೇಮಾವತಿ ಜಲಾಶಯ ಯೋಜನೆಯ (ಎಚ್‌ಆರ್‌ಪಿ) ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಸರ್ಕಾರಿ ಭೂಮಿ ಕಬಳಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ವರದಿ ನೀಡಿದ ಹಾಸನ ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ' ಎಂದು ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದರು.

‘ಪ್ರಕರಣದ ಸಮಗ್ರ ತನಿಖೆಗಾಗಿ ನೇಮಿಸಿದ್ದ ಹಾಸನ ಎಸಿ ನೇತೃತ್ವದ ತನಿಖಾ ಸಮಿತಿಯು 414 ಮಂಜೂರಾತಿ (1654 ಎಕರೆ) ರದ್ದುಪಡಿಸಿ, ಜಮೀನನ್ನು ಅಕ್ರಮವಾಗಿ ಮಾಡಿಸಿಕೊಂಡಿರುವ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಯೋಜನೆ ಸಂತ್ರಸ್ತರ ಹೆಸರಿನಲ್ಲಿ ಆಗಿರುವ ಭೂ ಮಂಜೂರಾತಿಗಳು ಸಂಶಯಾಸ್ಪದವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಜಮೀನು ಮುಟ್ಟುಗೋಲು ಹಾಕಿಕೊಂಡು ನೈಜ ಸಂತ್ರಸ್ತರಿಗೆ ನೀಡಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಆದರೆ, ಎಚ್‌ಆರ್‌ಪಿ ತನಿಖಾ ವರದಿಯೇ ಪ್ರಾಮಾಣಿಕ ಅಧಿಕಾರಿ ನಾಗರಾಜ್‌ ಅವರ ವರ್ಗಾವಣೆಗೆ ಕಾರಣವಾಗಿದೆ. ಹಾಸನಾಂಬ ದೇವಾಲಯದ ಆಡಳಿತಾಧಿಕಾರಿಯೂ ಆಗಿರುವ ಅವರನ್ನು ಉತ್ಸವಕ್ಕೆ ಒಂದು ದಿನ ಇರುವಾಗ ಎತ್ತಂಗಡಿ ಮಾಡಿರುವುದು ಸರಿಯಲ್ಲ. ತನಿಖಾ ವರದಿಯ ದಾಖಲೆಗಳನ್ನು ಜಿಲ್ಲಾ ಖಜಾನೆಯಲ್ಲಿ ಭದ್ರವಾಗಿ ಇರಿಸಬೇಕು. ಇಲ್ಲವಾದರೆ ದಾಖಲೆಗಳನ್ನು ಸುಟ್ಟು ಹಾಕುವ ಸಾಧ್ಯತೆ ಇದೆ. ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.