ADVERTISEMENT

ದೆಹಲಿ ಚಲೋಗೆ ನೂರು ದಿನ: ಕಪ್ಪು ಬಾವುಟ ಪ್ರದರ್ಶನ

ದೆಹಲಿ ಚಲೋಗೆ ನೂರು ದಿನ: ಕರಾಳ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 12:14 IST
Last Updated 6 ಮಾರ್ಚ್ 2021, 12:14 IST
ಹಾಸನ ಹೇಮಾವತಿ ಪ್ರತಿಮೆ ಎದುರು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಹಾಸನ ಹೇಮಾವತಿ ಪ್ರತಿಮೆ ಎದುರು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.   

ಹಾಸನ: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ರೈತರು ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆ ನೂರು ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಶನಿವಾರ ವಿವಿಧ ಸಂಘಟನೆಗಳು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದವು.

ನಗರದ ಹೇಮಾವತಿ ಪ್ರತಿಮೆ ಎದುರು ರೈತ, ಕಾರ್ಮಿಕ, ದಲಿತ ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ಕರಾಳ ದಿನ ಆಚರಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತ ವಿರೋಧಿ ಕೃಷಿ ಕಾಯ್ದೆ ವಾಪಸ್ ಪಡೆಯುವಂತೆ ಒತ್ತಾಯಿಸಿದರು.

ರೈತ ಸಂಘದ ಮುಖಂಡ ಕಣಗಾಲು ಮೂರ್ತಿ ಮಾತನಾಡಿ, ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ, ಕೇಂದ್ರಸರ್ಕಾರ ಕೂಡಲೇ ದರ ಇಳಿಸಲು ಕ್ರಮ ಕೈಗೊಳ್ಳಬೇಕು. ಕೃಷಿ ಕಾಯ್ದೆ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ನೂರು ದಿನದ ರೈತ ಚಳುವಳಿಯನ್ನು ಸಂಭ್ರಮಿಸುವ ಬದಲು ಕರಾಳ ದಿನವನ್ನಾಗಿ ಆಚರಿಸುವ ಪರಿಸ್ಥಿತಿ ನಿರ್ಮಿಸಲಾಗಿದೆ. ರೈತಸಮುದಾಯದ ಜೊತೆಗೆ ದೇಶದ ನಾಗರೀಕರು ಕೈ ಜೋಡಿಸದಿದ್ದರೆ ದೇಶದ ಭವಿಷ್ಯ ಅಂಧಕಾರದಲ್ಲಿರುತ್ತದೆ ಎಂದು ಎಚ್ಚರಿಸಿದರು.

ADVERTISEMENT

ರೈತರ ಚಳವಳಿ ನೂರು ದಿನ ಪೂರೈಸಿದರೂ ಪ್ರಧಾನಿ ನರೇಂದ್ರ ಮೋದಿ ಅವರು ರೈತರನ್ನು ಕರೆದು ಮಾತುಕತೆ ನಡೆಸುವ ಬದಲು, ಅವರಿಗೆ ಅವಮಾನಮಾಡುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಅಧ್ಯಕ್ಷ ಎಚ್.ಆರ್.ನವೀನ್‍ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು, ಮುಖಂಡರಾದ ಜಿ.ಪಿ.ಸತ್ಯನಾರಾಯಣ, ಮುಬಷಿರ್ ಅಹಮದ್, ಅಕ್ಮಲ್ ಜಾವೇದ್, ರಮೇಶ್, ಪೃಥ್ವಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.