ADVERTISEMENT

ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವೆ

ಹಂಗಾಮಿ ಮಹಾಪೌರರಾಗಿ ಅಧಿಕಾರ ಸ್ವೀಕರಿಸಿದ ಹೇಮಲತಾ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 4:15 IST
Last Updated 17 ಆಗಸ್ಟ್ 2025, 4:15 IST
ಹಾಸನ ಮಹಾನಗರ ಪಾಲಿಕೆ ಮೇಯರ್‌ ಆಗಿ ಅಧಿಕಾರ ಸ್ವೀಕರಿಸಿದ ಹೇಮಲತಾ ಅವರನ್ನು ಶಾಸಕ ಸ್ವರೂಪ್‌ ಪ್ರಕಾಶ್‌ ಸನ್ಮಾನಿಸಿದರು 
ಹಾಸನ ಮಹಾನಗರ ಪಾಲಿಕೆ ಮೇಯರ್‌ ಆಗಿ ಅಧಿಕಾರ ಸ್ವೀಕರಿಸಿದ ಹೇಮಲತಾ ಅವರನ್ನು ಶಾಸಕ ಸ್ವರೂಪ್‌ ಪ್ರಕಾಶ್‌ ಸನ್ಮಾನಿಸಿದರು    

ಹಾಸನ: ಉಪ ಮಹಾಪೌರರ ಸ್ಥಾನದಿಂದ ಮಹಾಪೌರಳಾಗಿ ಅಧಿಕಾರ ಸ್ವೀಕರಿಸಿದ್ದು, ಸದಸ್ಯರ ಸಹಕಾರ ಹಾಗೂ ಪಕ್ಷದ ಹಿರಿಯರ ಆಶೀರ್ವಾದದೊಂದಿಗೆ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ಹಂಗಾಮಿ ಮಹಾಪೌರ ಹೇಮಲತಾ ಕಮಲ್ ಕುಮಾರ್ ತಿಳಿಸಿದರು.

ಶನಿವಾರ ನಗರ ಪಾಲಿಕೆಯ ಆಯುಕ್ತ ಕೃಷ್ಣಮೂರ್ತಿ ಅವರಿಂದ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಕಾರಣ ಎಂ. ಚಂದ್ರೇಗೌಡರ ಸದಸ್ಯತ್ವ ರದ್ದಾಗಿದ್ದು, ಮಹಾಪೌರರ ಸ್ಥಾನದಿಂದ ವಜಾ ಮಾಡಲಾಗಿದೆ. ಹೀಗಾಗಿ ನಾನು ಅಧಿಕಾರ ಸ್ವೀಕರಿಸಿರುವುದಾಗಿ ಹೇಳಿದರು.

ಪಕ್ಷದ ಮುಖಂಡರಾದ ಎಚ್.ಡಿ. ರೇವಣ್ಣ, ಶಾಸಕ ಸ್ವರೂಪ್ ಪ್ರಕಾಶ್ ಸೇರಿದಂತೆ ಆಯುಕ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ. ಪಕ್ಷದ ನಾಯಕರು ಹಾಗೂ ಮಹಾನಗರ ಪಾಲಿಕೆಯ ಸದಸ್ಯರ ಸಹಕಾರದೊಂದಿಗೆ ಪಾಲಿಕೆಯನ್ನು ಸಮರ್ಥವಾಗಿ ಮುನ್ನಡೆಸುವ ಭರವಸೆ ಇದೆ ಎಂದರು.

ADVERTISEMENT

ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಎಚ್.ಡಿ. ರೇವಣ್ಣ ಅವರ ಸಮ್ಮುಖದಲ್ಲಿ ಈ ಹಿಂದೆ ನಗರಸಭೆ ಜೆಡಿಎಸ್ ಸದಸ್ಯರು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿತ್ತು. ಹೊಂದಾಣಿಕೆಯಂತೆ ನಡೆಯದೇ ಚಂದ್ರೇಗೌಡರು ಹಿರಿಯರ ಮಾತನ್ನು ತಪ್ಪಿದರು. ನಂತರ ಆಯುಕ್ತರ ನ್ಯಾಯಾಲಯದಲ್ಲಿ ನಮಗೆ ಜಯ ಸಿಕ್ಕಿದ್ದು, ಪಕ್ಷ ನಿಷ್ಠೆಗೆ ವಿರುದ್ಧವಾಗಿ ನಡೆಯುವವರಿಗೆ ತಕ್ಕ ಪಾಠವಾಗಿದೆ ಎಂದರು.

ಈ ಒಂದು ಬೆಳವಣಿಗೆ ನಮಗೂ ಸೇರಿದಂತೆ ಕಾರ್ಪೊರೇಟರ್‌ಗಳಿಗೆ ಸಂತಸ ತಂದಿದೆ. ವಿಪ್ ಉಲ್ಲಂಘನೆ ಸಂಬಂಧ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾದ ಲಿಂಗೇಶ್ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡರು ಆಯುಕ್ತರ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು. ಇದೀಗ ಚಂದ್ರೇಗೌಡರ ಸದಸ್ಯತ್ವ ರದ್ದಾಗಿದೆ ಎಂದರು.

ಚುನಾವಣೆ ಸಂದರ್ಭದಲ್ಲಿ ವಿಪ್ ಉಲ್ಲಂಘಿಸಿ ತಟಸ್ಥರಾಗಿದ್ದ ಚಂದ್ರೇಗೌಡ, ನಂತರ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣ ಸದಸ್ಯತ್ವ ಹಾಗೂ ಮಹಾಪೌರ ಸ್ಥಾನ ಕಳೆದುಕೊಳ್ಳುವಂತಾಯಿತು. ವೈಯಕ್ತಿಕವಾಗಿ ಹಾಗೂ ಪಕ್ಷದ ಹಿತದೃಷ್ಟಿಯಿಂದ ಈ ಬೆಳವಣಿಗೆ ಸಂತಸ ತಂದಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಸುಮಾರು ಒಂದೂವರೆ ಗಂಟೆ ಪ್ರಾದೇಶಿಕ ಆಯುಕ್ತರ ಆದೇಶವನ್ನು ಪರಿಶೀಲಿಸಿದ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ನಂತರ ಹೇಮಲತಾ ಅವರಿಗೆ ಅಧಿಕಾರಿ ಸ್ವೀಕರಿಸಲು ಅವಕಾಶ ಮಾಡಿಕೊಟ್ಟರು. ಹೇಮಲತಾ ಅವರು ಅಧಿಕಾರ ಸ್ವೀಕರಿಸಿದ ನಂತರ ಅಭಿಮಾನಿಗಳು ನಗರಸಭೆ ಆಭರಣದಲ್ಲಿ ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.