ADVERTISEMENT

ಯಾವುದೇ ಜ್ವರವಿದ್ದರೂ ಪರೀಕ್ಷೆ ಮಾಡಿಸಿಕೊಳ್ಳಿ; ಆರೋಗ್ಯಾಧಿಕಾರಿ

ಸಮನ್ವಯ ಸಮಿತಿ ಸಭೆಯಲ್ಲಿ ಆರೋಗ್ಯಾಧಿಕಾರಿ ಡಾ.ವಿಜಯ್‌

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 15:31 IST
Last Updated 12 ಜೂನ್ 2025, 15:31 IST
ಬೇಲೂರಿನಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್‌ ಮಾತನಾಡಿದರು.
ಬೇಲೂರಿನಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್‌ ಮಾತನಾಡಿದರು.   

ಬೇಲೂರು: ಜನರಲ್ಲಿ ಯಾವುದೇ ರೀತಿಯ ಜ್ವರವಿರಲಿ, ಕಡ್ಡಾಯವಾಗಿ ರಕ್ತ ಪರೀಕ್ಷೆ ಮಾಡಿಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಹೇಳಿದರು.

ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡೆಂಗಿ, ಚಿಕೂನ್ ಗುನ್ಯ, ಮಲೇರಿಯಾ ತಡೆಗಟ್ಟುವ ಕುರಿತಾದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು  ಮಾತನಾಡಿದರು.

ಡೆಂಗಿ ಜ್ವರ ಮಾರಣಾಂತಿಕವಾಗಿದ್ದು, ಮಳೆಗಾಲ ಪ್ರಾರಂಭ ಆಗಿರುವುದರಿಂದ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡಬೇಕು. ಈಡೀಸ್ ಸೊಳ್ಳೆ ಕಚ್ಚುವುದರಿಂದ ಜ್ವರ ಬರುತ್ತದೆ. ಇದು ಸ್ವಚ್ಛ ನೀರಿನಲ್ಲಿ ಸಂತಾನ ಅಭಿವೃದ್ಧಿ ಮಾಡುತ್ತಿದ್ದು, ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಸಾರ್ವಜನಿಕರು ಮನೆಯ ಒಳಾಂಗಣದಲ್ಲಿ ತೊಟ್ಟಿ, ಡ್ರಮ್ಮು, ಬ್ಯಾರೆಲ್‌ಗಳಲ್ಲಿ ನೀರು ಶೇಖರಿಸಿ, ಸರಿಯಾಗಿ ಮುಚ್ಚಿಡಬೇಕು. ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ನಂತರ ನೀರು ತುಂಬಿಸಿ ಮುಚ್ಚಿಡಬೇಕು ಎಂದರು.

ADVERTISEMENT

ಮನೆಯ ಹೊರಾಂಗಣದಲ್ಲಿ ತೆಂಗಿನ ಚಿಪ್ಪು, ಎಳೆನೀರು ಚಿಪ್ಪು, ಟಯರ್, ಒಡೆದ ಬಾಟಲಿಗಳು, ಪ್ಲಾಸ್ಟಿಕ್ ಲೋಟಗಳು ಇನ್ನಿತರ ಪರಿಕರಗಳಲ್ಲಿ ನೀರು ಸಂಗ್ರಹ ಆಗದಂತೆ ನೋಡಿಕೊಳ್ಳಬೇಕು. ಘನತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಉಷಾ ಮಾತನಾಡಿ, ಡೆಂಗಿ ಜ್ವರದ ಲಕ್ಷಣಗಳಾದ ತೀವ್ರ ಜ್ವರ, ತಲೆನೋವು, ಮೈಕೈ ನೋವು, ಮಾಂಸ ಖಂಡಗಳಲ್ಲಿ ನೋವಿನಿಂದ ಲಕ್ಷಣಗಳು ಕಂಡು ಬಂದರೆ ತಕ್ಷಣ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಸೊಳ್ಳೆ ಕಚ್ಚುವಿಕೆಯಿಂದ ಪಾರಾಗಲು ಸೊಳ್ಳೆ ಪರದೆ ಬಳಸಬೇಕು. ಮೈತುಂಬ ಬಟ್ಟೆ ಧರಿಸಬೇಕು. ಡೆಂಗಿ, ಚಿಕೂನ್ ಗುನ್ಯ, ಮಲೇರಿಯಾ ರೋಗಗಳನ್ನು ತಡೆಗಟ್ಟಲು ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿಷ್ಕ್ರಿಯಗೊಳಿಸುವುದೊಂದೆ ದಾರಿ ಎಂದು ತಿಳಿಸಿದರು.

ಉಪ ತಹಶೀಲ್ದಾರ್ ಅಶೋಕ್ ಮಾತನಾಡಿ, ಇಲಾಖಾವಾರು ಜವಾಬ್ದಾರಿ ಕುರಿತು ಮಾಹಿತಿ ನೀಡಿದರು/ ಎಲ್ಲ ಇಲಾಖೆಯವರ ಸಹಕಾರದಿಂದ ಈ ರೋಗಗಳನ್ನು ತಡೆಗಟ್ಟಬಹುದು.. ರೋಗಗಳ ನಿಯಂತ್ರಣ ಮತ್ತು ತಡೆಗಟ್ಟುವಲ್ಲಿ ತಾಲ್ಲೂಕು ಆಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಸಹಾಯಕ ನಿರ್ದೇಶಕ ಗುರುಪ್ರಸಾದ್, ತಾಲ್ಲೂಕು ಪಂಚಾಯಿತಿಯ ಗಂಗಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಮೋಹನ್, ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳು, ಸಿಬ್ಬಂದಿ, ಶಿಶು ಯೋಜನ  ಅಭಿವೃದ್ಧಿ ಅಧಿಕಾರಿಗಳು, ಆಶಾ ಮೇಲ್ವಿಚಾರಕರು ಹಾಗೂ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.