ADVERTISEMENT

2,500 ಎಕರೆ ಅರಣ್ಯ ಭೂಮಿ ‘ಅಕ್ರಮ’ ಹಂಚಿಕೆ

ಮಂಜೂರಾತಿ ರದ್ದುಗೊಳಿಸಲು ಉಪವಿಭಾಗಾಧಿಕಾರಿಗೆ ಡಿಎಫ್‌ಒ ಪತ್ರ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 4:38 IST
Last Updated 31 ಮಾರ್ಚ್ 2022, 4:38 IST

ಸಕಲೇಶಪುರ: ತಾಲ್ಲೂಕಿನ ವಿವಿಧ ಸರ್ವೆ ನಂಬರ್‌ಗಳಲ್ಲಿನ 2,500ಕ್ಕೂ ಹೆಚ್ಚು ಅರಣ್ಯ ಭೂಮಿಯನ್ನು ಕಾನೂನು ಬಾಹಿರವಾಗಿ ತಹಶೀಲ್ದಾರ್‌ಗಳು ಹಂಚಿಕೆ ಮಾಡಿದ್ದಾರೆ. 1980–2021ರ ಅವಧಿಯಲ್ಲಿ ಮೂರ್ಕಣ್ಣು ಗುಡ್ಡದ 7,938 ಎಕರೆ 38 ಗುಂಟೆ ಪ್ರದೇಶದಲ್ಲಿರುವ ಜಾಗವನ್ನು 508 ಜನರಿಗೆ ಹಂಚಿಕೆ ಮಾಡಲಾಗಿದೆ.

‘ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ ನಕಲಿ ಪ್ರಮಾಣಪತ್ರ ಸೃಷ್ಟಿಸಿ ಅವರ ಹೆಸರಿಗೆ, ಫಾರಂ ನಂ. 53, 57ರಡಿ, ಮಾಜಿ ಸೈನಿಕರಿಗೆ, ಸ್ಮಶಾನಕ್ಕೆ ಹಾಗೂ ಸರ್ಕಾರದ ಕೆಲ ಯೋಜನೆಗಳ ಹೆಸರಿನಲ್ಲಿಅರಣ್ಯ ಜಾಗವನ್ನುಹಂಚಿಕೆ ಮಾಡಿದ್ದು, ಅದನ್ನು ವಜಾ ಮಾಡುವಂತೆ ಉಪವಿಭಾಗಾಧಿಕಾರಿಗೆ ವರದಿ ನೀಡಲಾಗಿದೆ’ ಎಂದು ಅರಣ್ಯ ಜಾಗೃತ ದಳದಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ತಿಳಿಸಿದರು.

‘ಕಂದಾಯ ಇಲಾಖೆಯ ಸೆಕ್ಷನ್‌ 94 ಬಿ, ಸಬ್‌ ಕಾಲಂ 3ರಲ್ಲಿ ಅರಣ್ಯ ಜಾಗವನ್ನು ಯಾವುದೇ ಉದ್ದೇಶಕ್ಕೂ ಮಂಜೂರು ಮಾಡಲು ಅಧಿಕಾರವೇ ಇಲ್ಲ. ಸಾರ್ವಜನಿಕ ಅಗತ್ಯ ಉಪಯೋಗಕ್ಕಾಗಿ ಮಂಜೂರು ಮಾಡಲೇ ಬೇಕಾದ ಸಂದರ್ಭ ಬಂದರೆ, ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕು. ಆದರೆ, ಪಶ್ಚಿಮಘಟ್ಟದ ದಟ್ಟ ಮಳೆಕಾಡು, ಸೋಲಾ ಗುಡ್ಡ ಪ್ರದೇಶಗಳನ್ನು ಕಾನೂನು ಬಾಹಿರವಾಗಿ ಹಂಚಿಕೆ ಮಾಡಲಾಗಿದೆ. ಈ ಸಂಬಂಧಲಭ್ಯ ಇರುವ ದಾಖಲೆಗಳೊಂದಿಗೆ ಮಂಜೂರಾತಿಗಳನ್ನು ರದ್ದುಗೊಳಿಸುವಂತೆ ಉಪವಿಭಾಗಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಹಿಂದಿನ ತಹಶೀಲ್ದಾರ್ ಅವಧಿಯಲ್ಲಿ (2018ಕ್ಕೂ ಹಿಂದೆ) ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಅಕ್ರಮ ಮಂಜೂರಾತಿ ಆಗಿರುವುದು ಈಗಾಗಲೇ ಮೂವರು ಉಪವಿಭಾಗಾಧಿಕಾರಿಗಳ ತನಿಖಾ ತಂಡದಿಂದ ಪತ್ತೆಯಾಗಿದೆ. ಪೊಲೀಸ್‌ ಇಲಾಖೆಯಿಂದಲೂತನಿಖೆ ನಡೆಯುತ್ತಿದೆ. ಅರಣ್ಯ ಪ್ರದೇಶಗಳ ಮಂಜೂರಾತಿಯಲ್ಲಿ ಲೋಪ ಆಗಿರುವುದು ತನಿಖೆಯಿಂದ ದೃಢಪಟ್ಟಿದೆ. ಸಂತ್ರಸ್ತರ ಹೆಸರಿನಲ್ಲಿ ಮಂಜೂರಾತಿ ಆಗಿರುವ ಎಲ್ಲಾ ಕಡತಗಳ ಸಂತ್ರಸ್ತರ ವಂಶವೃಕ್ಷ ಪರಿಶೀಲನೆ ನಡೆಯುತ್ತಿದೆ’ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯೆಗೆ ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್‌ ಅವರು ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.