ADVERTISEMENT

ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ

ಕಟ್ಟಡ ಸಾಮಗ್ರಿಗಳು ಕೊರತೆಯಾಗದಂತೆ ಎಚ್ಚರ ವಹಿಸಿ: ರೇವಣ್ಣ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 14:26 IST
Last Updated 7 ಏಪ್ರಿಲ್ 2021, 14:26 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವುದರ ಜತೆಗೆ ಕಟ್ಟಡ ಸಾಮಗ್ರಿಗಳಿಗೆ ಕೊರತೆ
ಆಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು.

ಜಿಲ್ಲೆಯಲ್ಲಿರುವ 102 ಕ್ವಾರಿಗಳ ಪೈಕಿ 88 ಕಾರ್ಯ ನಿರ್ವಹಿಸುತ್ತಿವೆ. 83 ಕ್ರಷರ್‌ಗಳ ಪೈಕಿ 48 ಮಾತ್ರ
ಚಾಲ್ತಿಯಲ್ಲಿವೆ. ಉಳಿದ ಕ್ರಷರ್‌ಗಳು ಮತ್ತು ಕ್ವಾರಿಗಳು ಯಾಕೆ ನಡೆಯುತ್ತಿಲ್ಲ ಎಂಬುದರ ವಿಚಾರಣೆ ನಡೆಸಬೇಕು.
ಅಂತಹವರ ಪರವಾನಗಿ ರದ್ದು ಮಾಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕೂಡಲೇ ಪೊಲೀಸ್‌ ವರಿಷ್ಠಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ಕ್ರಷರ್‌ ಮತ್ತು
ಕ್ವಾರಿ ಮಾಲೀಕರು ಹಾಗೂ ಎಂಜಿನಿಯರ್‌ಗಳ ಸಭೆ ಕರೆದು ಚರ್ಚಿಸಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ
ಮಾಡಿ ಗಣಿಗಾರಿಕೆ ನಡೆಯಲು ಅನುವು ಮಾಡಿಕೊಡಬೇಕು. ಕ್ವಾರಿ, ಕ್ರಷರ್‌ಗಳು ನಡೆಯದ ಕಾರಣ ಕಟ್ಟಡ
ಸಾಮಗ್ರಿಗಳ ದರಗಳು ದುಪ್ಪಟ್ಟು ಆಗುತ್ತಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ADVERTISEMENT

ಕಾನೂನು ಪಾಲನೆ ಮಾಡದ ಕಲ್ಲು ಗಣಿಗಾರಿಕೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರು ಯಾವುದೇ
ಪಕ್ಷಕ್ಕೆ ಸೇರಿರಲಿ. ಒಂದು ಬೇಳೆ ನನ್ನ ಬೆಂಬಲಿಗರು ತಪ್ಪು ಮಾಡಿದ್ದರೆ ಅವರನ್ನೂ ಬಂಧಿಸಲಿ ಎಂದು ಹೇಳಿದರು.

ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿ ಕಲ್ಲೊಡೆಬೋರೆ ಕಾವಲ್‌ ಗ್ರಾಮದ ಸರ್ವೆ ನಂ.
1/ಪಿ1 ಪ್ರದೇಶದಲ್ಲಿ ಗುತ್ತಿಗೆ ಪಡೆದಿರುವ ಪುಷ್ಪಗಿರಿ ಕ್ರಷರ್‌ ಎಂ.ಎ. ರವಿಕುಮಾರ್‌ , ರಿಗ್‌ ಬ್ಲಾಸ್ಟ್‌ ಮಾಡಿ ಕಲ್ಲು ಗಣಿಗಾರಿಕೆ ಮಾಡಿದ್ದಾರೆ. ರಿಗ್‌ ಯಂತ್ರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಸಾರ್ವಜನಿಕರ ಹಿತದೃಷ್ಟಿಯಿಂದ ಕಲ್ಲುಗಣಿಗಾರಿಕೆಗೆ ಅವಕಾಶ ನೀಡದಂತೆ ಹೊಳೆನರಸೀಪುರ ತಹಶೀಲ್ದಾರ್‌ಕೆ.ಆರ್‌.ಶ್ರೀನಿವಾಸ್ ಅವರು ಜಿಲ್ಲಾಧಿಕಾರಿಗೆ ವರದಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಕಲ್ಲೋಡೆಬೋರೆಕಾವಲ್‌ ಗ್ರಾಮದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಬಿಜೆಪಿ ಮುಖಂಡ ಎ.
ಮಂಜು, ತಾತನಹಳ್ಳಿ ಗ್ರಾಮಸ್ಥರಾದ ರಾಜು.ಟಿ.ವೈಬಿನ್‌, ಟಿ.ಆರ್‌. ಯೋಗಾಚಾರ್‌ ಅವರರು ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ. ಕ್ರಷರ್‌ಗಳಿಂದ ಹಳ್ಳಿಯ ಪರಿಸರ, ಅಂತರ್ಜಲ ಕುಸಿತ, ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದರು.

ಚಾಕೇನಹಳ್ಳಿ ನಾಗೇಶ್ ಗೋದಾಮಿನಲ್ಲಿರುವ 3 ಸಾವಿರ ಕೆ.ಜಿ ಸ್ಫೋಟಕ ಸಾಮಗ್ರಿಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಕಿಡಿಗೇಡಿಗಳು ರಾತ್ರಿ ವೇಳೆ ಬೆಂಕಿ ಹಚ್ಚಿದರೆ ಸುತ್ತಮುತ್ತಲಿನ ಊರುಗಳೇ ಹೊತ್ತಿ ಉರಿಯಲಿವೆ. ಸ್ಫೋಟಕ ಸಾಮಗ್ರಿ ಅನ್‌ಲೋಡ್‌ ಮಾಡುವ ವೇಳೆ ಜಿಲೆಟಿನ್‌ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ ₹ 5 ಲಕ್ಷ ಪರಿಹಾರ ನಿಡಬೇಕು. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು.

ಮೂರು ವರ್ಷದಿಂದ ಕೇಂದ್ರ ಸರ್ಕಾರ ಸಂಸದರ ಅನುದಾನ ನಿಲ್ಲಿಸಿದೆ. ಬಿಜೆಪಿ ಸಂಸದರಿಗೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವ ಯೋಗ್ಯತೆ ಇಲ್ಲ. ಕೋವಿಡ್‌ ಕಾರಣ ಹೇಳಿ ಶಾಸಕರ ಅನುದಾನ ನಿಲ್ಲಿಸಿದರೆ ರಾಜ್ಯದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.