ADVERTISEMENT

ಸರ್ವರಿಗೂ ಸಮಾನತೆ ನೀಡಿದ ಗ್ರಂಥ: ಶಾಸಕ ಎ.ಮಂಜು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 2:56 IST
Last Updated 27 ನವೆಂಬರ್ 2025, 2:56 IST
ಅರಕಲಗೂಡಿನಲ್ಲಿ ಬುಧವಾರ ಸಂವಿಧಾನ ದಿನಾಚರಣೆ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಶಾಸಕ ಎ. ಮಂಜು ಕೆ.ಸಿ. ಸೌಮ್ಯ, ಕೆ.ಪಿ.ನಾರಾಯಣ್, ರವಿಕುಮಾರ್ ಭಾಗವಹಿಸಿದ್ದರು
ಅರಕಲಗೂಡಿನಲ್ಲಿ ಬುಧವಾರ ಸಂವಿಧಾನ ದಿನಾಚರಣೆ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಶಾಸಕ ಎ. ಮಂಜು ಕೆ.ಸಿ. ಸೌಮ್ಯ, ಕೆ.ಪಿ.ನಾರಾಯಣ್, ರವಿಕುಮಾರ್ ಭಾಗವಹಿಸಿದ್ದರು   

ಅರಕಲಗೂಡು: ಭಾರತ ಅಳವಡಿಸಿಕೊಂಡಿರುವ ಸಂವಿಧಾನ ವಿಶ್ವದಲ್ಲೆ ಅತ್ಯಂತ ಪ್ರಬುದ್ಧವಾಗಿದ್ದು, ಎಲ್ಲರಿಗೂ ಸಮಾನತೆಯನ್ನು ಕಲ್ಪಿಸಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.

ತಾಲ್ಲೂಕು ಆಡಳಿತ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಪಟ್ಟಣದ ಶಿಕ್ಷಕರ ಭವನದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ದಿನ ಆಚರಣೆ ನಿರ್ಧಾರ ಕೈಗೊಂಡ ಕಾರಣ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದ ಸಂವಿಧಾನ ಸಮಿತಿ ವಿಶ್ವದ ವಿವಿಧ ರಾಷ್ಟ್ರಗಳು ಅಳವಡಿಸಿಕೊಂಡಿದ್ದ ಸಂವಿಧಾನಗಳನ್ನು ಪರಿಶೀಲಿಸಿ ಅವುಗಳಲ್ಲಿದ್ದ ಉತ್ತಮ ಅಂಶಗಳನ್ನು ಅಳವಡಿಸಿಕೊಂಡಿದೆ ಎಂದರು.

ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು, ಅವರು ವಿಶ್ವವೆ ಮೆಚ್ಚುವಂತಹ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಆದರೆ ಅಂದಿನ ದಿನಗಳಲ್ಲಿ ಅಂಬೇಡ್ಕರ್ ಅವರಿಗೆ ಸೂಕ್ತ ಅವಕಾಶಗಳನ್ನು ನೀಡದಿರುವುದು ಬೇಸರದ ಸಂಗತಿಯಾಗಿದೆ. ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ವಿಚಾರಗಳ ಕುರಿತು ಓದುವಂತೆ ತಿಳಿಸಿದರು.

ADVERTISEMENT

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಬಿ.ಪಿ. ಬಸವರಾಜ್ ಪ್ರಧಾನ ಭಾಷಣ ಮಾಡಿದರು. ತಹಶೀಲ್ದಾರ್ ಕೆ.ಸಿ. ಸೌಮ್ಯ, ಬಿಇಒ ಕೆ.ಪಿ. ನಾರಾಯಣ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಆರ್. ರವಿಕುಮಾರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜ್, ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

ಕಾರ್ಯಕ್ರಮಕ್ಕೆ ಮುನ್ನ ತಾಲ್ಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಮೆರವಣಿಗೆಯಲ್ಲಿ ಕಾರ್ಯಕ್ರಮದ ವೇದಿಕೆಗೆ ತೆರಳಲಾಯಿತು.

ಅರಕಲಗೂಡಿನಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎ. ಮಂಜು ಉದ್ಘಾಟಿಸಿದರು. ಕೆ.ಸಿ. ಸೌಮ್ಯ ಕೆ.ಪಿ.ನಾರಾಯಣ್ಪುಟ್ಟರಾಜ್ ರವಿಕುಮಾರ್ ಭಾಗವಹಿಸಿದ್ದರು.