ADVERTISEMENT

ಜಲಾಶಯ ಭರ್ತಿಗೆ 12 ಅಡಿ ಬಾಕಿ

ಹೇಮಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳ: ರೈತರ ಸಂತಸ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 3:58 IST
Last Updated 6 ಜುಲೈ 2022, 3:58 IST
ಹಾಸನ ತಾಲ್ಲೂಕಿನ ಗೊರೂರಿನ ಹೇಮಾವತಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು.
ಹಾಸನ ತಾಲ್ಲೂಕಿನ ಗೊರೂರಿನ ಹೇಮಾವತಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು.   

ಹಾಸನ: ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯಕ್ಕೆ ಒಳಹರಿವು‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಾರಿ ಮುಂಗಾರು ಪೂರ್ವ ಮಳೆಯೂ ಉತ್ತಮವಾಗಿದ್ದು, ಇದೀಗ ಜಲಾಶಯದಲ್ಲೂ ನೀರು ಸಂಗ್ರಹ ಆಗಿರುವುದರಿಂದ ಜಿಲ್ಲೆಯ ಜನರಲ್ಲಿ ಹರ್ಷ ಮೂಡಿಸಿದೆ.

ಹೇಮಾವತಿ ಜಲಾಶಯದ ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಮುಂಗಾರು ಮಳೆ ಬಿರುಸಾಗಿದೆ. ಹಾಗಾಗಿ ಜಲಾಶಯಕ್ಕೆ‌ ಒಳ ಹರಿವಿನ ಪ್ರಮಾಣ ಏರಿಕೆಯಾಗಿದೆ.

37.10 ಟಿಎಂಸಿ ಸಂಗ್ರಹಣಾ ಸಾಮರ್ಥ್ಯದ ಜಲಾಶಯ ಕಳೆದ ವರ್ಷ ಜುಲೈ ಕೊನೆಯ ವಾರದಲ್ಲಿ ಭರ್ತಿಯಾಗಿತ್ತು. ಆಗ ಹೆಚ್ಚುವರಿ ಕ್ರಸ್ಟ್‌ಗೇಟ್‌ಗಳ ಮೂಲಕ ನೀರನ್ನು ನದಿಗೆ ಹರಿಬಿಡಲಾಗಿತ್ತು. ಆದರೆ ಈ ವರ್ಷವೂ ಜಲಾಶಯ ಭರ್ತಿಗೆ ಇನ್ನು ಕೆಲವೇ ಅಡಿಗಳು ಬಾಕಿ ಉಳಿದಿವೆ.

ADVERTISEMENT

‘35 ಟಿಎಂಸಿ ಅಡಿಗೂ ಹೆಚ್ಚು ನೀರು ಸಂಗ್ರಹವಾದರೆ ಮಾತ್ರ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ನಾಲೆಗಳಲ್ಲಿ ನೀರು ಹರಿಸಲಾಗುತ್ತದೆ. ಈಗಾಗಲೇ ಜಲಾಶಯದ ಭದ್ರತಾ ದೃಷ್ಟಿಯಿಂದ ಸ್ವಲ್ಪ ಪ್ರಮಾಣದ ನೀರನ್ನು ನಾಲೆ‌ ಹಾಗೂ ನದಿಗೆ ಹರಿಬಿಡಲಾಗುತ್ತಿದೆ’ ಎಂದು ಹೇಮಾವತಿ ಅಣೆಕಟ್ಟು ವಿಭಾಗದ ಎಂಜಿನಿಯರ್ ಸ್ಪಷ್ಟಪಡಿಸಿದ್ದಾರೆ.

12 ಅಡಿ ಬಾಕಿ: ಜಲಾಶಯ ಭರ್ತಿಗೆ ಇನ್ನು 12 ಅಡಿಗಳಷ್ಟು ನೀರು ತುಂಬಬೇಕಿದೆ. ಒಳಹರಿವು ಹೆಚ್ಚಳವಾಗಿದೆ. ಆದರೆ ಮಳೆಯ ಪ್ರಮಾಣ ಇದೇ ರೀತಿ‌ ಹೆಚ್ಚಾದಲ್ಲಿ, ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿ ಆಗಲಿದೆ ಎಂದು ಅಂದಾಜಿಸಲಾಗಿದೆ.ಒಳಹರಿವಿನ ಪ್ರಮಾಣ ನಿತ್ಯವೂ 6 ಸಾವಿರ ಕ್ಯುಸೆಕ್‌ ಇದ್ದು, ಮಂಗಳವಾರ 9,464 ಕ್ಯುಸೆಕ್‌ಗೆ ಹಚ್ಚಿದೆ.

ಕಾವೇರಿ ನದಿ‌ ನೀರು ಪ್ರಾಧಿಕಾರದ ಅಣತಿಯಂತೆ ಹೇಮಾವತಿಯಿಂದ ಪ್ರತಿದಿನ ಇಂತಿಷ್ಟು ಕ್ಯೂಸೆಕ್ಸ್ ನೀರು ಹರಿಬಿಡಲಾಗುತ್ತಿದೆ. ಒಳಹರಿವು ಹೆಚ್ಚಾದರೆ ಯಾವುದೇ ತೊಂದರೆ ಇಲ್ಲ. ಸಕಲೇಶಪುರ, ಮೂಡಿಗೆರೆ, ಚಿಕ್ಕಮಗಳೂರು ಭಾಗದಲ್ಲಿ ಮಳೆಯ ಪ್ರಮಾಣ ಇಳಿಕೆಯಾದಲ್ಲಿ ಒಳಹರಿವು ಕಡಿಮೆಯಾಗಲಿದೆ ಎಂದು ಎಂಜಿನಿಯರ್‌ಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.