ADVERTISEMENT

ಉನ್ನತ ಮಟ್ಟದ ತನಿಖೆಗೆ ಒತ್ತಾಯ

ಪ್ರಾಚಾರ್ಯರ ವಿರುದ್ಧ ಸರಿಯುತ್ತರ ಹೊಡೆದು ಹಾಕಿದ ಆರೋಪ: ಆರ್‌ಪಿಐ ಸತೀಶ್‌

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 14:29 IST
Last Updated 6 ಏಪ್ರಿಲ್ 2021, 14:29 IST
ಆರ್‌ಪಿಐ ಸತೀಶ್‌
ಆರ್‌ಪಿಐ ಸತೀಶ್‌   

ಹಾಸನ: ಉತ್ತರ ಪತ್ರಿಕೆಯಲ್ಲಿನ ಸರಿಯುತ್ತರಗಳನ್ನು ಉದ್ದೇಶಪೂರ್ವಕವಾಗಿ ಹೊಡೆದು ಹಾಕಿರುವ ಆರೋಪಕ್ಕೆ
ಸಂಬಂಧಿಸಿದಂತೆ ನಗರದ ಸರ್ಕಾರಿ ನರ್ಸಿಂಗ್‌ ಕಾಲೇಜು ಪ್ರಾಂಶುಪಾಲರ ವಿರುದ್ಧದ ಎಫ್‌ಐಆರ್‌ ರದ್ಧುಪಡಿಸಿ,
ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಆರ್‌ಪಿಐ ಸತೀಶ್‌
ಆಗ್ರಹಿಸಿದರು.

ಪರಿಶಿಷ್ಟ ವರ್ಗಕ್ಕೆ ಸೇರಿರುವ ಪ್ರಾಚಾರ್ಯೆ ಶೋಭಾ ದೇವಮಾನೆ ಅವರು ಏಳು ತಿಂಗಳಲ್ಲಿ ನಿವೃತ್ತಿಯಾಗಲಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲಿ ಇಲ್ಲಿವರೆಗೂ ಯಾವುದೇ ಕಪ್ಪುಚುಕ್ಕಿ ಇಲ್ಲದ ಕೆಲಸ ಮಾಡಿದ್ದಾರೆ. ಇವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ವಿದ್ಯಾರ್ಥಿ ಚನ್ನಯ್ಯ ಹಿರೇಮಠ ಮೆಡಿಕಲ್‌ ಸರ್ಜಿಕಲ್‌ ಎನ್‌-ಎಸ್‌.ಪಿ ವಿಷಯದಲ್ಲಿ ಅನುತ್ತೀರ್ಣನಾಗಿದ್ದು,
ಅನುಮಾನಗೊಂಡ ಉತ್ತರ ಪತ್ರಿಕೆಯ ಫೋಟೊ ಕಾಪಿ ತರಿಸಿಕೊಂಡು ನೋಡಿದಾಗ ಉತ್ತರವನ್ನು ಹೊಡೆದು
ಹಾಕಿರುವುದು ಗೊತ್ತಾಗಿದೆ. ಈ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದ್ದಾನೆ. ವಿಚಾರಣೆ ನಡೆಸಿದಾಗ ಉತ್ತರ
ಪತ್ರಿಕೆ ಸ್ಕ್ಯಾನಿಂಗ್‌ ನೋಡಿಕೊಳ್ಳುತ್ತಿದ್ದ ಜೀವನ್‌ ಸಹಾಯಕ್ಕೆ ಹೋಗಿದ್ದ ವಿದ್ಯಾರ್ಥಿ ಚಂದ್ರಶೇಖರ್‌ ಮಾಡಿರುವ
ತಪ್ಪು. ಇದನ್ನು ಆತನೇ ಒಪ್ಪಿಕೊಂಡಿದ್ದಾನೆ ಎಂದರು.

ADVERTISEMENT

ಈ ವಿಷಯ ತಿಳಿದ ಕಾಲೇಜಿನ ಹಳೆ ವಿದ್ಯಾರ್ಥಿ ಆರ್‌.ಎಸ್.ಎಸ್‌ ಕಾರ್ಯಕರ್ತ ಪ್ರಜ್ವಲ್‌, ಎಬಿವಿಪಿ ಸಂಚಾಲಕರಾದ ಬೊಮ್ಮಣ್ಣ, ಪ್ರಮೋದ್‌ ಸಂಚು ರೂಪಿಸಿ, ತಪ್ಪನ್ನು ಪ್ರಾಂಶುಪಾಲರ ಮೇಲೆ ಹೊರಿಸಿ, ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಆರೋಪಿಸಿದರು.‌

ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್‌ ಮಾಡಲು ವಿಶ್ವವಿದ್ಯಾಲಯದಿಂದ ನೇಮಕಗೊಂಡಿದ್ದ ಜೀವನ್‌ ಪ್ರಾಂಶುಪಾಲರ
ಅನುಮತಿ ಇಲ್ಲದೆ ಸಹಾಯಕ್ಕಾಗಿ ಚಂದ್ರಶೇಖರ್‌ ಹಾಗೂ ಇತರೆ ಆರು ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ತಪ್ಪು ಮಾಡಿರುವ ವಿದ್ಯಾರ್ಥಿ ಚಂದ್ರಶೇಖರ್‌ ಹಾಗೂ ಜೀವನ್‌ ಎಂಬುವರನ್ನು ಬಿಟ್ಟು ಪ್ರಾಚಾರ್ಯೆ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿರುವುದರ ಹಿಂದಿನ ಉದ್ದೇಶ ಏನು? ಈ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು.

ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿ ಚೆನ್ನಯ್ಯ ಹಿರೇಮಠ ಅವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ದಲಿತ ಹಕ್ಕುಗಳ ಸಮಿತಿ ರಾಜ್ಯ ಸಹ ಸಂಚಾಲಕ, ಆರ್‌. ಮರಿಜೋಸೆಫ್‌, ಮಾದಿಗ ದಂಡೋರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಕಬ್ಬಳ್ಳಿ, ಸಮತಾ ಸೈನಿಕ ದಳದ ಜಿಲ್ಲಾ ಉಪಾಧ್ಯಕ್ಷಮುಸಾವೀರ್‌ ಪಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.