ಹೊಳೆನರಸೀಪುರ: ಜೂನ್ 21ರಂದು ನಡೆಯುವ ಅಂತರರಾಷ್ಟ್ರೀಯ ಯೋಗದಿನ ಆಚರಣೆಯಲ್ಲಿ ಭಾಗವಹಿಸಲಿಚ್ವಿಸುವವರಿಗಾಗಿ ಇಲ್ಲಿನ ಪತಂಜಲಿಯೋಗ ಕೂಟದ ವತಿಯಿಂದ ಯೋಗ ಭವನದಲ್ಲಿ ಉಚಿತ ಯೋಗಾಭ್ಯಾಸ, ಸೂರ್ಯನಮಸ್ಕಾರ ಹಾಗೂ ಪ್ರಾಣಾಯಾಮ ತರಬೇತಿ ನೀಡಲಾಗುತ್ತಿದೆ.
ಪತಂಜಲಿ ಯೋಗ ಕೂಟದ ಅನೇಕರು ಅತ್ಯುತ್ತಮ ಯೋಗ ಪಟುಗಳಿದ್ದು ಅವರ ಜೊತೆಯಲ್ಲಿ ಹೊಸಬರಿಗೂ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಯೋಗ ಶಿಕ್ಷಕ ಗಣೇಶ್‍ಬಾಬು ಯೋಗಾಸನ ಹೇಳಿ ಕೊಡುತ್ತಿದ್ದು ಪ್ರತೀ ಆಸನ ಮಾಡುವಾಗಲೂ ಆ ಆಸನದಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸುತ್ತಾರೆ.
‘ಯೋಗಾಸನ ನಮ್ಮ ದೈಹಿಕ ಆರೋಗ್ಯ ಕಾಪಾಡಿ, ದೇಹವನ್ನು ರೋಗ ಮುಕ್ತವಾಗಿಸುತ್ತದೆ. ಪ್ರಾಣಾಯಾಮ ನಮ್ಮ ಶ್ವಾಸಕೋಶ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಧ್ಯಾನ ನಮ್ಮ ಮೆದುಳಿಗೆ ವಿಶ್ರಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ’ ಎಂದರು.
‘ಪತಂಜಲಿ ಯೋಗಕೂಟದಲ್ಲಿ 70 ವರ್ಷ ದಾಟಿದವರು ಅನೇಕರಿದ್ದಾರೆ. ಅವರು ಕಳೆದ ಕೆಲವಾರು ವರ್ಷಗಳಿಂದ ಇಲ್ಲಿ ಯೋಗಾಭ್ಯಾಸ ಮಾಡುತ್ತಾ, ಆರೋಗ್ಯ ಕಾಪಾಡಿಕೊಂಡು ಉತ್ತಮ ದೈಹಿಕ ಸಾಮರ್ಥ್ಯ ಹೊಂದಿದ್ದಾರೆ’ ಎಂದರು.
ಹಿರಿಯ ಯೋಗಪಟುಗಳಾದ ವಾಸುದೇವ್‍ಮೂರ್ತಿ, ಲೋಕೇಶ್, ನರಸಿಂಹ, ನಾರಾಯಣ, ಕರುಣಾಕರ ಗುಪ್ತಾ, ಲಲಿತಾ ದಯಾನಂದ್, ಸುಮಾ, ಧನಲಕ್ಷೀ ಅವರೊಂದಿಗೆ ಅಂತರರಾಷ್ಟ್ರೀಯ ಯೋಗದಿನದಲ್ಲಿ ಭಾಗವಹಿಸಲು ಅನೇಕರು ತರಬೇತಿ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.