ADVERTISEMENT

ಜೆಡಿಎಸ್‌ ಮುಗಿಸಲು ಒಳಸಂಚು: ರಾಷ್ಟ್ರೀಯ ಪಕ್ಷಗಳ ವಿರುದ್ಧ ಶಾಸಕ ರೇವಣ್ಣ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 12:39 IST
Last Updated 17 ಸೆಪ್ಟೆಂಬರ್ 2019, 12:39 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಮುಗಿಸಲು ರಾಷ್ಟ್ರೀಯ ಪಕ್ಷಗಳು ಒಳ ಸಂಚು ನಡೆಸಿವೆ ಎಂದು ಶಾಸಕ ಎಚ್‌.ಡಿ.ರೇವಣ್ಣ ಆರೋಪಿಸಿದರು.

ರಾಜ್ಯದಲ್ಲಿ ಅಸ್ತಿತ್ವ ಉಳಿಸಿಕೊಂಡಿರುವ ಪ್ರಾದೇಶಿಕ ಪಕ್ಷ ಮುಗಿಸುತ್ತೇವೆ ಅಂದುಕೊಂಡಿದ್ದರೆ ಅದು ಯಶಸ್ವಿ ಆಗುವುದಿಲ್ಲ. ಕೆಲ ನಾಯಕರು ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಆರು ದಶಕದಿಂದ ದೇವೇಗೌಡರು ಮತ್ತು ಕುಮಾರಸ್ವಾಮಿ ಈ ಎಲ್ಲವನ್ನು ನೋಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಜೆಡಿಎಸ್‌ ಅಧಿಕಾರಕ್ಕೆ ಬರದಿದ್ದರೆ ರೈತರ ₹ 48 ಸಾವಿರ ಕೋಟಿ ಸಾಲ ಮನ್ನಾ, ತೆಂಗು ಬೆಳೆ ನಷ್ಟಕ್ಕೆ ₹ 200 ಕೋಟಿ ಪರಿಹಾರ, ಆಲೂಗಡ್ಡೆ ಬೆಳೆಗೆ ಸಬ್ಸಿಡಿ, ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ದೇಶದಲ್ಲಿ ಡಿ.ಕೆ.ಶಿವಕುಮಾರ್‌ ಒಬ್ಬರೇ ಆಸ್ತಿ ಮಾಡಿರುವುದಾ? ಇ.ಡಿ. ವಿಚಾರಣೆಗೆ ಹೋಗುವ ಮುನ್ನ ಗೌಡರ ಆಶೀರ್ವಾದ ಪಡೆದರು. ಬೇರೆ ಯಾರಾದರೂ ಆಗಿದ್ದರೆ ಬಿಜೆಪಿಗೆ ಶರಣಾಗಿರುತ್ತಿದ್ದರು. ಅಣ್ಣ, ತಮ್ಮಂದಿರು ಧೈರ್ಯವಾಗಿ ಎದುರಿಸುತ್ತಿದ್ದಾರೆ. ಅವರ ಜತೆ ನಿಕಟ ಸಂಪರ್ಕದಲ್ಲಿರುವುದನ್ನು ಎಲ್ಲರಿಗೂ ತಿಳಿಸಲು ಆಗುವುದಿಲ್ಲ. ಹಗಲು ಸಿದ್ದರಾಮಯ್ಯ, ರಾತ್ರಿ ಯಡಿಯೂರಪ್ಪ ಬಳಿ ಇರುವಂತಹರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಇಂತಹವರೇ ಬೀಗರ ಊಟ ಹುಡುಕಿಕೊಂಡು ಹೋಗುವುದು’ ಎಂದು ಪರೋಕ್ಷವಾಗಿ ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಎಚ್.ಡಿ.ಕುಮಾರಸ್ವಾಮಿ ಅವರು ಕೆಲವರನ್ನು ಸಂಸದ, ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ ತಪ್ಪು ಮಾಡಿದರು. ರಾಜಕೀಯ ಶಾಶ್ವತ ಅಲ್ಲ. ಜನರ ಪ್ರೀತಿ ಮುಖ್ಯ. ನಂಬಿಕೆ ದ್ರೋಹಿಗಳಿಂದ ದೂರ ಇರುವಂತೆ ಅಣ್ಣನಾಗಿ ಕುಮಾರಸ್ವಾಮಿಗೆ ಸಲಹೆ ನೀಡಿದ್ದೇನೆ’ ಎಂದರು.

ಕೆ. ಆರ್. ಪೇಟೆ ಅನರ್ಹ ಶಾಸಕ ನಾರಾಯಣಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ₹ 700 ಕೋಟಿ ಅನುದಾನ ನೀಡಲಾಗಿದೆ. ಸಮ್ಮಿಶ್ರ ಸರ್ಕಾರ ರಚನೆ ವೇಳೆ ಸಿ.ಎಂ ಸ್ಥಾನಕ್ಕೆ ಬೇಡಿಕೆ ಇಡಲಿಲ್ಲ. ಆದರೂ ಅಧಿಕಾರ ಒಲಿಯಿತು. ಸಿಕ್ಕ ಅಧಿಕಾರದಲ್ಲಿ ಹಲವು ಜನಪರ ಕೆಲಸ ಮಾಡಿದ ತೃಪ್ತಿ ಇದೆ ಎಂದರು.

ADVERTISEMENT

ಎಲಿವೇಟೆಡ್‌ ಕಾರಿಡಾರ್ ಯೋಜನೆಯ ಟೆಂಡರ್‌ ಪ್ರಕ್ರಿಯೆ ರದ್ದುಗೊಳಿಸಿ, ಹೊಸದಾಗಿ ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ಸಿ.ಎಂ. ಸೂಚಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ರೇವಣ್ಣ, ಯಾವುದೇ ತನಿಖೆ ನಡೆಸಲಿ. ಬೇಕಾದರೆ ಮರು ಸರ್ವೆ ಮಾಡಲಿ. ಮೊದಲ ಹಂತದಲ್ಲಿ 24 ಕಿ.ಮೀ. ಸಿವಿಲ್‌ ಕಾಮಗಾರಿಗೆ ₹4,612 ಕೋಟಿಗೆ ಕರೆಯಲಾಗಿದ್ದ ಟೆಂಡರ್‌ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ಸ್ಪಷ್ಟ ಪಡಿಸಿದರು.

‘ಮೈಸೂರಿನಲ್ಲಿ ಕೆ.ಎಸ್‌.ರಂಗಪ್ಪ ಅವರ ನಿವಾಸಕ್ಕೆ ಸಿದ್ದರಾಮಯ್ಯ ಉಪಹಾರಕ್ಕೆ ಹೋಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ನಾನು ಬಿ. ಶಿವರಾಂ ಭೇಟಿ ಮಾಡಿದ ತಕ್ಷಣ ಜೆಡಿಎಸ್‌ಗೆ ಬರುತ್ತಾರೆ ಎಂದರ್ಥವಲ್ಲ’ ಎಂದರು.

ಮತ್ತೆ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತಂದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಶ್ರಮಿಸಲಾಗುವುದು. 17 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೈತ್ರಿ ಕುರಿತ ತೀರ್ಮಾನವನ್ನು ದೇವೇಗೌಡರು ಮತ್ತು ಸೋನಿಯಾ ಗಾಂಧಿ ಕೈಗೊಳ್ಳುತ್ತಾರೆ. ಹಿಂದಿನ ಚುನಾವಣೆಯಲ್ಲೂ ಫ್ರೆಂಡ್ಲಿ ಫೈಟ್‌ ಕುರಿತು ಪ್ರಸ್ತಾಪಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.