ಅರಸೀಕೆರೆ: ‘ಭಾರತದ ಇತಿಹಾಸ, ಪರಂಪರೆ, ಸಂಸ್ಕೃತಿ ಹಾಗೂ ಸ್ವಾತಂತ್ರ್ಯಪೂರ್ವ ವ್ಯವಸ್ಥೆಗಳನ್ನು ಭವಿಷ್ಯದ ಮಕ್ಕಳಿಗೆ ಪರಿಚಯಿಸುವುದು ಅತ್ಯವಶ್ಯಕವಾಗಿದೆ’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ಹೊರವಲಯದ ಮೈಸೂರು ರಸ್ತೆಯಲ್ಲಿರುವ ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನಲ್ಲಿ ತಾಲೂಕು ಆಡಳಿತ, ಶಾಲಾ ಶಿಕ್ಷಣ ಇಲಾಖೆ, ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯಲ್ಲಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
‘ಶತಮಾನಗಳ ಹಿಂದೆ ನಡೆದಿರುವ ಘಟನಾವಳಿಗಳನ್ನು ಚರಿತ್ರೆಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ಇದರ ಜತೆಗೆ ವಿದ್ಯಾರ್ಥಿಗಳ ಪಠ್ಯಗಳಲ್ಲಿ ದೇಶದ ಇತಿಹಾಸ ಹಾಗೂ ವಾಸ್ತವವನ್ನು ತಿಳಿಸಬೇಕು. ಭಾರತದ ಇತಿಹಾಸವನ್ನು ಇಂದಿನ ಮಕ್ಕಳಿಗೆ ತಿಳಿಸಿಕೊಡದಿದ್ದರೆ ದೊಡ್ಡ ಅಪರಾಧವಾಗುತ್ತದೆ’ ಎಂದರು.
‘ದೇಶದ ಪೃಕೃತಿ ಸಂಪತ್ತು, ರುಚಿಕರ ಸಾಂಬಾರು ಪದಾರ್ಥಗಳು ಹಾಗೂ ನಮ್ಮಲ್ಲಿರುವ ವೈಷಮ್ಯ ಬಳಸಿಕೊಂಡು ಬ್ರಿಟಿಷರು ಭಾರತವನ್ನು ಸುಮಾರು ವರ್ಷಗಳ ಕಾಲ ಆಳಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ ಶಾಂತಿಯುತ ಹೋರಾಟದಿದಲೇ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ನಾಯಕನಾದರೆ, ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಭಾರತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.
ತಹಶೀಲ್ದಾರ್ ಎಂ.ಜಿ. ಸಂತೋಷ್ ಕುಮಾರ್ ಮಾತನಾಡಿ, ‘ಗಾಂಧೀಜಿಯವರ ಚಿಂತನೆ ಆದರ್ಶವಾಗಿವೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನ ಮಂತ್ರಿಯಾಗಿ ‘ಜೈ ಜವಾನ್, ಜೈ ಕಿಸಾನ್’ ಎಂಬ ತತ್ವದೊಂದಿಗೆ ದೇಶಕ್ಕೆ ಕಡಿಮೆ ಅವಧಿಯಲ್ಲಿ ನೀಡಿದ ಕೊಡುಗೆ ಸ್ಮರಣೀಯವಾಗಿದೆ. ಈ ಮಹಾನ್ ನಾಯಕರ ಜೀವನದ ಮೌಲ್ಯಗಳನ್ನು ಎಲ್ಲರೂ ಅನುಸರಿಸಬೇಕಾಗಿದೆ’ ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಗೀಜಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ಶಿವಕುಮಾರ್, ಅನಂತ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆಯ ಛೇರ್ಮನ್ ಅನಂತ ಕುಮಾರ್, ಶಿಶು ಅಭಿವೃದ್ಧಿ ಅಧಿಕಾರಿ ಯೋಗೀಶ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪರಶಿವಮೂರ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಯಶೋಧಮ್ಮ, ದೈಹಿಕ ಪರಿವೀಕ್ಷಕ ವಸಂತಕುಮಾರ್, ಸಮನ್ವಯ ಅಧಿಕಾರಿ ಶಂಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.