ಹೊಳೆನರಸೀಪುರ: ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಜನಸ್ಪಂದನ ಸಭೆಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ಕಂಡುಬಂತು.
ತಾಲ್ಲೂಕಿನಲ್ಲಿ ಜನರ ಸಮಸ್ಯೆ ಪರಿಹರಿಸಲು ಪ್ರತಿ ತಿಂಗಳ ಮೊದಲ ಶನಿವಾರ ಜನಸ್ಪಂದನ ಸಭೆ ನೆಡೆಸಲು ಸರ್ಕಾರ ಆದೇಶ ನೀಡಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳೂ ಹಾಜರಿದ್ದು, ಜನರ ಸಮಸ್ಯೆ ಪರಿಹರಿಸಬೇಕು ಎಂಬ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ನಡೆಸಲಾದ ಜನಸ್ಪಂದನ ಸಭೆಗೆ ಸಾರ್ವಜನಿಕರು ನಿರಾಸಕ್ತಿ ತೋರಿರುವುದು ವ್ಯಕ್ತವಾಯಿತು.
ಕೆಲವು ಇಲಾಖೆಗಳ ಅಧಿಕಾರಿಗಳು 11 ಗಂಟೆ ಆದರೂ ಬಂದಿರಲಿಲ್ಲ. ಬಂದವರಲ್ಲಿ ಕೆಲವರು ಕಚೇರಿಯಲ್ಲಿ ಕೆಲಸ ಇದೆ ನಾವು ಹೋಗುತ್ತೇವೆ ಎಂದು ತಹಶೀಲ್ದಾರ್ ಅವರಲ್ಲಿ ಅನುಮತಿ ಕೇಳುತ್ತಿದ್ದರು. ಯಾವುದೇ ಇಲಾಖೆಯವರು ಸಭೆ ಬಿಟ್ಟು ಹೋದರೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಪ್ರಸಂಗ ನಡೆಯಿತು.
ಜನಸ್ಪಂದನ ಸಭೆಯಲ್ಲಿ 21 ಅರ್ಜಿಗಳು ಸಲ್ಲಿಕೆಯಾದವು. ಅವುಗಳಲ್ಲಿ ಕಂದಾಯ ಇಲಾಖೆಗೆ ಸಂಭಂದಿಸಿದಂತೆ 12 ಅರ್ಜಿಗಳು, ತಾಲ್ಲೂಕು ಪಂಚಾಯಿತಿ, ನೀರಾವರಿ ಇಲಾಖೆ ಹಾಗೂ ಪುರಸಭೆ ಇಲಾಖೆಗೆ 2 ಅರ್ಜಿ, ಲೋಕೋಪಯೋಗಿ ಇಲಾಖೆ, ಅಬಕಾರಿ ಇಲಾಖೆಗೆ, ಸಾರ್ವಜನಿಕ ಆಸ್ಪತ್ರೆ ಹಾಗೂ ಅಲ್ಪಸಂಖ್ಯಾತ ಮೊರಾರ್ಜಿ ಶಾಲೆಗೆ ಸಂಬಂಧಿಸಿದಂತೆ ತಲಾ 1 ಅರ್ಜಿ ಸಲ್ಲಿಕೆಯಾಗಿದ್ದವು.
ಅರ್ಜಿಗಳನ್ನು ಸ್ವೀಕರಿಸಿದ ಅಧಿಕಾರಿಗಳು, ಅರ್ಜಿಗಳಲ್ಲಿರುವ ಸಮಸ್ಯೆಗಳನ್ನು ಕಾನೂನಿನ ರೀತಿ ತ್ವರಿತವಾಗಿ ಪರಿಹರಿಸಲಾಗುವುದು ಎಂದು ತಿಳಿಸಿದರು.
ಪುರಸಭೆ ವ್ಯಾಪ್ತಿಯ 21, 22ನೇ ವಾರ್ಡಿನಲ್ಲಿ 18ರಿಂದ 20 ವರ್ಷದ ಯುವಕರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಇದನ್ನು ತಡೆಗಟ್ಟಿ, ರೈತರ ಭೂಮಿಯನ್ನು ನೀರಾವರಿ ಇಲಾಖೆ ಸ್ವಾಧೀನ ಪಡಿಸಿಕೊಂಡು ರೈತರಿಗೆ ಪರಿಹಾರ ದೊರಕಿಸಿ, ಪುರಸಭೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಶಾಶ್ವತ ಪರಿಹಾರ ಕಲ್ಪಿಸಿ, ಅಲ್ಪ ಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಪಾಠ ಪ್ರವಚನ ನಡೆಸಿ ಊಟದ ವ್ಯವಸ್ಥೆ ಸರಿ ನೀಡಿ, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕೆಲವು ವೈದ್ಯರಿಂದ ಸರಿಯಾಗಿ ಸೇವೆ ದೊರಕಿಸಿ, ಕೆಲ ಶುಶ್ರೂಷಕಿಯರು ರೋಗಿಗಳೊಂದಿಗೆ ಸಮಾಧಾನದಿಂದ ವರ್ತಿಸದೆ ವಿನಾಕಾರಣ ಕೂಗಾಡುತ್ತಾರೆ ಎನ್ನುವ ದೂರುಗಳು ಸಲ್ಲಿಕೆಯಾಗಿದ್ದವು.
‘ಹಲವು ಬಾರಿ ಅರ್ಜಿ ನೀಡಿದರೂ ಬಗೆಹರಿಯದ ಸಮಸ್ಯೆ’
‘ಕರಾಬು ಜಾಗ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನನ್ನ ಜಮೀನಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕಳೆದ ಎರಡೂವರೆ ವರ್ಷದಿಂದ ಅನೇಕ ಬಾರಿ ಅರ್ಜಿ ನೀಡಿದ್ದೇನೆ. ಈ ಹಿಂದಿನ ತಹಶೀಲ್ದಾರ್ ಕೃಷ್ಣಮೂರ್ತಿ ಹಾಗೂ ಈಗಿರುವ ತಹಶೀಲ್ದಾರ್ ರೇಣುಕುಮಾರ್ ಅವರಿಗೂ ಅರ್ಜಿಗಳನ್ನು ಹತ್ತಾರು ಬಾರಿ ನೀಡಿದ್ದೇನೆ. ಆದರೆ ನನ್ನ ಸಮಸ್ಯೆ ಬಗೆಹರಿಸುತ್ತಿಲ್ಲ. ದಾಖಲೆ ಸರಿ ಇದೆ. ಆದರೂ ನನ್ನ ಕೆಲಸ ಆಗದಿರಲು ಕಾರಣ ಏನೆಂದು ತಿಳಿದಿಲ್ಲ. ಆದ್ದರಿಂದ ನಾನು ಇದುವರೆಗೂ ನೀಡಿದ ಅರ್ಜಿಗಳ ದಾಖಲೆಗಳನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಹಾಗೂ ಕಂದಾಯ ಇಲಾಖೆ ಕಾರ್ಯದರ್ಶಿಗೆ ದೂರಿನೊಂದಿಗೆ ನೀಡುತ್ತೇನೆ’ ಎಂದು ರೈತ ಚಿಟ್ಟನಹಳ್ಳಿ ಚಂದ್ರಶೇಖರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.