ಜಾವಗಲ್: ಮಹಾನ್ ವ್ಯಕ್ತಿಗಳ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಉನ್ನತಿ ಸಾಧಿಸಬಹುದು ಎಂದು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊಫೆಸರ್ ಬಸವರಾಜು ಹೊನ್ನೇಬಾಗಿ ತಿಳಿಸಿದರು.
ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ವರ್ಷದ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ಜಾನಪದ ಉತ್ಸವ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಭವಿಷ್ಯದಲ್ಲಿ ಪರಿಪೂರ್ಣ ವ್ಯಕ್ತಿಗಳಾಗಬೇಕಾದರೆ ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಹಾಗೂ ಬಸವಣ್ಣನವರಂಥ ಅನೇಕ ಮಹಾನ್ ಚೇತನಗಳ ತತ್ವ ಆದರ್ಶಗಳನ್ನು ಪಾಲಿಸುವುದರ ಜೊತೆಗೆ ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ನಮ್ಮ ಪರಂಪರೆಯಲ್ಲಿ ತಿಳಿಸಲಾಗಿರುವ ವಿಚಾರಧಾರೆಗಳನ್ನು ಅರಿತುಕೊಂಡು ಮೌಲ್ಯಯುತ ಜೀವನವನ್ನು ನಡೆಸಬೇಕು’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಕಲೆ, ಸಾಹಿತ್ಯ, ಹಾಗೂ ಎನ್.ಎಸ್.ಎಸ್ ನಂತಹ ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಳ್ಳಲು ಪ್ರಯತ್ನಿಸಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಸ್ವಾಮಿ, ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹರೀಶ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಜಗನ್ನಾಥ್, ಪಾಪಣ್ಣ, ನಾಗರಾಜ್, ಕುಸುಮ, ಸತ್ಯನಾರಾಯಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.