ADVERTISEMENT

ಹಾಸನ : ಜಿಲ್ಲೆಯಲ್ಲಿ 14 ಲಕ್ಷ ಮತದಾರರು

ಸಂಪೂರ್ಣ ಭಾವಚಿತ್ರವಿರುವ ಮತದಾರರ ಪಟ್ಟಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 14:42 IST
Last Updated 17 ಜನವರಿ 2019, 14:42 IST
ಹಾಸನದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೀಡಿದರು.
ಹಾಸನದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೀಡಿದರು.   

ಹಾಸನ : ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿದ್ದು, ಜಿಲ್ಲೆಯಲ್ಲಿ7,21,677 ಮಹಿಳೆಯರು ಹಾಗೂ 7,08,088 ಪುರುಷರು ಸೇರಿ ಒಟ್ಟು 14,29,765 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಸ್ತಾಂತರಿಸಿ ಮಾತನಾಡಿದರು.

ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿರುವ ವೇಳಾ ಪಟ್ಟಿಯಂತೆ 2018ರ ಅ.10 ರಂದು ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿ, ಮತದಾರರ ನೋಂದಣಾಧಿಕಾರಿ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಹಾಗೂ ಮತಗಟ್ಟೆಗಳ ಹಂತದಲ್ಲಿ ಪ್ರಕಟಿಸಲಾಗಿದೆ ಎಂದರು.

ADVERTISEMENT

2018ರ ಅ.10 ರಿಂದ ನ. 25 ರವರೆಗೆ ಸಾರ್ವಜನಿಕರಿಂದ ಹಾಗೂ ರಾಜಕೀಯ ಪಕ್ಷಗಳಿಂದ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯಾಗಿದ್ದು, ಒಟ್ಟು 39386 ಅರ್ಜಿಗಳು ಸ್ವೀಕೃತಗೊಂಡಿವೆ. ಈ ಪೈಕಿ 38856 ಅರ್ಜಿಗಳನ್ನು ಪುರಸ್ಕರಿಸಿ, 468 ಅರ್ಜಿಗಳನ್ನು ಆಯಾ ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಾಣಾಧಿಕಾರಿ ಹಾಗೂ ಸಹಾಯಕ, ಮತದಾರರ ನೋಂದಾಣಾಧಿಕಾರಿ ತಿರಸ್ಕರಿಸಿದ್ದಾರೆ ಎಂದು ತಿಳಿಸಿದರು.

ಪಟ್ಟಿಯಲ್ಲಿದ್ದ 257 ಭಾವಚಿತ್ರವಿಲ್ಲದ ಮತದಾರರ ವಿವರಗಳನ್ನು ಪಡೆದು ಪರಿಶೀಲನೆ ನಡೆಸಿ, ಭಾವಚಿತ್ರವನ್ನು ಅಪ್ ಲೋಡ್ ಮಾಡುವ ಕಾರ್ಯವನ್ನು ಸಂಪೂರ್ಣವಾಗಿ ನಿರ್ವಹಿಸಿ ಶೇಕಡಾ 100 ರಷ್ಟು ಪ್ರಗತಿ ಸಾಧಿಸಲಾಗಿದೆ. ಇದರಿಂದ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಸಂಪೂರ್ಣ ಭಾವಚಿತ್ರ ಇದೆ. ಗುರುತಿನ ಚೀಟಿ ವಿತರಣೆ ಮಾಡುವ ಕಾರ್ಯದಲ್ಲೂ ಶೇಕಡಾ 100 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ- 2019ರ ಅಂತಿಮ ಮತದಾರರ ಪಟ್ಟಿಯನ್ನು ಕೇಂದ್ರ ಚುನವಾಣಾ ಆಯೋಗದ ವೇಳಾಪಟ್ಟಿಯಂತೆ ಪ್ರಚುರಪಡಿಸಲಾಗಿದ್ದು, ಸಾರ್ವಜನಿಕರು ಆಯಾ ಮತಗಟ್ಟೆಗಳ ಹಂತದಲ್ಲಿ, ಉಪವಿಭಾಗಾಧಿಕಾರಿ ಕಚೇರಿ, ತಾಲ್ಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ಅಲ್ಲದೇ ಭಾರತ ಚುನಾವಣಾ ಆಯೋಗದ ವೆಚ್‌ಸೈಟ್ https://eci.gov.in ಮುಖ್ಯ ಚುನಾವಣಾಧಿಕಾರಿಗಳು, ಬೆಂಗಳೂರು ವೆಬ್‌ಸೈಟ್ https://ceokarnataka.kar.nic.in ಗಳಲ್ಲೂ ಮಾಹಿತಿ ವೀಕ್ಷಿಸಬಹುದಾಗಿದೆ ಹಾಗೂ ಪಡೆಯಬಹುದು ಎಂದು ನುಡಿದರು.

ಮುಖ್ಯ ಚುನಾವಣಾಧಿಕಾರಿ ನಿರ್ದೇಶಗಳಂತೆ ಮತದಾರರ ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ ಸಾಮಾನ್ಯ ಉಚಿತ ಸಹಾಯವಾಣಿ ಸಂಖ್ಯೆ: 1950 ಅನುಷ್ಠಾನಗೊಳಿಸಲಾಗಿದೆ ಎಂದು ವಿವರಿಸಿದರು.

ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಾಗೂ ಜಿಲ್ಲಾ ಮಟ್ಟದಲ್ಲಿ ಮತದಾರರ ಪಟ್ಟಿಗಳ ಕುರಿತು ಮತದಾರರು, ಸಾರ್ವಜನಿಕರು ಮಾಹಿತಿ ಪಡೆಯಬಹುದು. ಜ.25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮಾಂತರ ಪ್ರದೇಶ ಮಟ್ಟದಲ್ಲಿ ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.