ADVERTISEMENT

ಹಾಸನ ಜಿಲ್ಲೆಯಲ್ಲಿ ಏಳು ಮಲೇರಿಯಾ ಪ್ರಕರಣ ಪತ್ತೆ

2022ರ ವೇಳೆಗೆ ರೋಗ ಸಂಪೂರ್ಣ ನಿರ್ಮೂಲನೆ ಗುರಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:00 IST
Last Updated 25 ಏಪ್ರಿಲ್ 2019, 20:00 IST
ರಾಜ್‌ಗೋಪಾಲ್‌
ರಾಜ್‌ಗೋಪಾಲ್‌   

ಹಾಸನ: 2019ರ ಮಾರ್ಚ್‌ ವರೆಗಿನ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 7 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದೆ ಎಂದು ಮಲೇರಿಯಾ ಸರ್ವೇಕ್ಷಣಾ ಅಧಿಕಾರಿ ಡಾ.ರಾಜ್‌ಗೋಪಾಲ್‌ ಹೇಳಿದರು.

‘ಶೂನ್ಯ ಮಲೇರಿಯಾ ನನ್ನಿಂದಲೇ ಪ್ರಾರಂಭ’ ಎಂಬ ವರ್ಷದ ಘೋಷ ವಾಕ್ಯದೊಂದಿಗೆ ಮಲೇರಿಯಾ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ವರ್ಷವೂ ವಿಶ್ವ ಮಲೇರಿಯಾ ದಿನಾಚರಣೆ ಆಚರಿಸಲಾಗುತ್ತಿದೆ. ರೋಗ ಹರಡುವಿಕೆ-ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಮಂಗಳೂರಿನ ವಿದ್ಯಾರ್ಥಿಗಳು ಹಾಗೂ ವಾಹನ ಚಾಲಕರಲ್ಲಿ ರೋಗದ ಲಕ್ಷಣಗಳು ಕಂಡು ಬಂದಿವೆ. ಮಲೇರಿಯಾ ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗ. ಈ ರೋಗವನ್ನು 2022 ರ ವೇಳೆಗೆ ರಾಜ್ಯದಿಂದ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ. ಮಂಗಳೂರು, ಉಡುಪಿ ಅಥವಾ ಇತರೆ ಮಲೇರಿಯಾ ಪೀಡಿತ ಊರುಗಳಿಗೆ ಭೇಟಿ ನೀಡುವವರು, ವಲಸೆ ಬಂದವರು ಹಾಗೂ ಕೂಲಿ ಕಾರ್ಮಿಕರ ರಕ್ತ ಪರೀಕ್ಷೆ ನಡೆಸಿ ರೋಗ ಪತ್ತೆ ಹಚ್ಚಿ ಹರಡದಂತೆ ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

2014 ರಲ್ಲಿ ಪತ್ತೆಯಾಗಿದ್ದ 68 ಪ್ರಕರಣಗಳು ಹಂತ, ಹಂತವಾಗಿ ಕಡಿಮೆ ಆಗುತ್ತಿವೆ. ಅಲ್ಲದೇ, ವಿವಿಧ ಹಂತಗಳಲ್ಲಿ ಮಲೇರಿಯಾ ಸಮೀಕ್ಷೆ ಕೈಗೊಳ್ಳಲಾಗಿದೆ. ಮಂಗಳೂರು-ಉಡುಪಿ ಭಾಗಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಜಿಲ್ಲೆಯ ಹಲವು ಭಾಗಗಳಲ್ಲಿ ಇಲಾಖೆ ವತಿಯಿಂದ ಶಾಲಾ, ಕಾಲೇಜು ಮತ್ತು ಜನನಿಬಿಡ ಪ್ರದೇಶದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ಜ್ವರ ಕಾಣಿಸಿಕೊಂಡರೂ ರಕ್ತ ಪರೀಕ್ಷೆ ಮಾಡಿಸಿಕೊಂಡರೆ ಸೋಂಕಿನ ಬಗ್ಗೆ ನಿಖರ ಮಾಹಿತಿ ಪಡೆದು ಜ್ವರ ಹರಡದಂತೆ ಮುಂಜಾಗ್ರತೆ ಕ್ರಮ ವಹಿಸಬಹುದಾಗಿದೆ ಎಂದು ಸಲಹೆ ನೀಡಿದರು.

ನಿಶ್ಯಕ್ತಿ, ಸುಸ್ತು, ಜ್ವರ, ತಲೆ ನೋವು, ಚಳಿ, ಉಸಿರಾಟ ಜೋರು ಮತ್ತು ಕಡಿಮೆ ಆಗುವ ಲಕ್ಷಣಗಳು ಕಂಡು ಬಂದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ, ಡಾ.ಹಿರಣ್ಣಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.