
ಚನ್ನರಾಯಪಟ್ಟಣ: ತಾಲ್ಲೂಕಿನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಮಕ್ಕಳಿಗಾಗಿಯೇ ಸಾಹಿತ್ಯ ಪರಿಷತ್ ಕಾರ್ಯನಿರ್ವಹಿಸುತ್ತಿದೆ.
2012ರಲ್ಲಿ ಅಸ್ತಿತ್ವಕ್ಕೆ ಬಂದ ಪರಿಷತ್‌ಗೆ ಸಾಹಿತ್ಯ ಸೇರಿ, ದೇಸಿ ಸೊಗಡಿನ ಕಲೆಗೆ ಮಹತ್ವ ನೀಡುವುದು ಉದ್ದೇಶ. ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ಘಟಕಗಳಿವೆ. ಬಹುತೇಕ ತಾಲ್ಲೂಕುಗಳಲ್ಲೂ ಘಟಕಗಳಿವೆ. ಮಕ್ಕಳಲ್ಲಿರುವ ಪ್ರತಿಭೆಗೆ ವೇದಿಕೆ ಒದಗಿಸುವ ಮೂಲಕ ಅವರ ಪ್ರತಿಭೆಯನ್ನು ಅನಾವರಣ ಮಾಡುವಲ್ಲಿ ಸಕ್ರಿಯವಾಗಿ ದುಡಿಯುತ್ತಿವೆ.
ನವದೆಹಲಿ, ಕೇರಳದ ಕಾಸರಗೋಡು, ಗೋವಾ, ಪಂಜಾಬ್ ಮತ್ತು ಹರಿಯಾಣ, ಮಹಾರಾಷ್ಟ್ರದ ಪುಣೆಯಲ್ಲೂ ಘಟಕ ತೆರೆದು ಕನ್ನಡದ ಸಾಹಿತ್ಯದ ಕಂಪನ್ನು ಹರಡುತ್ತಿದೆ. ರಾಜ್ಯದ ಹಲವು ಶಾಲೆಗಳಲ್ಲೂ ಘಟಕಗಳಿವೆ.
ದೆಹಲಿ, ಹಾಸನದಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆದಿದೆ. ಹಾಸನ ಸೇರಿ ಐದು ಕಡೆ ರಾಜ್ಯ ಸಮ್ಮೇಳನ, 20 ಜಿಲ್ಲಾ ಸಮ್ಮೇಳನ ಮತ್ತು ತಾಲ್ಲೂಕು ಸಮ್ಮೇಳನ ಆಯೋಜಿಸಲಾಗಿದೆ. ಚನ್ನರಾಯಪಟ್ಟಣ, ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳ ಕುಪ್ಪಳಿ, ಶೃಂಗೇರಿ ಹಾಗೂ ಚಿತ್ರದುರ್ಗ ಜಿಲ್ಲೆ ಸಾಣೇನಹಳ್ಳಿಯಲ್ಲಿ ಸಾಹಿತ್ಯ ಕಮ್ಮಟ ಏರ್ಪಡಿಸಿ ಮಕ್ಕಳಲ್ಲಿ ಕವನವಾಚನ, ಕಥೆ ಹೇಳುವ, ನಾಟ್ಯ ಕಲೆ, ನಾಟಕ ಕುರಿತು ಪ್ರತಿಭೆಗೆ ವೇದಿಕೆ ಒದಗಿಸಲಾಗಿದೆ.
ಕೆಲದಿನಗಳ ಹಿಂದೆ ಜಿಲ್ಲಾ ಘಟಕಗಳ ಅಧ್ಯಕ್ಷರ ಸಮಾವೇಶವನ್ನು ಶ್ರವಣಬೆಳಗೊಳದಲ್ಲಿ ಏರ್ಪಡಿಸಲಾಗಿತ್ತು.
‘ಚಿಕ್ಕಂದಿನಿಂದಲೇ ಸಾಹಿತ್ಯಾಭಿರುಚಿ ಮೂಡಿಸುವ ವಿಶೇಷ ಪ್ರಯತ್ನ ನಿರಂತರವಾಗಿದೆ’ ಎನ್ನುತ್ತಾರೆ ರಾಜ್ಯ ಘಟಕದ ಅಧ್ಯಕ್ಷ, ಪರಿಸರವಾದಿ ಸಿ.ಎನ್. ಅಶೋಕ್.
‘ಆದಿಚುಂಚನಗಿರಿ ಹಾಸನ ಶಾಖಾ ಮಠಾಧೀಶ ಶಂಭುನಾಥ ಸ್ವಾಮೀಜಿ ಇದರ ಮಹಾಪೋಷಕರು. ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನ, ನೆರವು ಸಾಕಷ್ಟಿದೆ’ ಎಂದು ’ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.