ADVERTISEMENT

ಹಣ್ಣುಗಳ ರಾಜನಿಗೆ ಬಲು ಬೇಡಿಕೆ

ಮಾರುಕಟ್ಟೆಯಲ್ಲಿ ವಿವಿಧ ತಳಿಯ ಮಾವಿನ ಘಮಲು: ವ್ಯಾಪಾರ ಜೋರು

ಕೆ.ಎಸ್.ಸುನಿಲ್
Published 2 ಜೂನ್ 2019, 17:11 IST
Last Updated 2 ಜೂನ್ 2019, 17:11 IST
ಹಾಸನದ ಆರ್‌.ಸಿ ರಸ್ತೆಯಲ್ಲಿ ಮಾವಿನ ಹಣ್ಣು ಮಾರಾಟಕ್ಕೆ ಇಟ್ಟಿರುವುದು
ಹಾಸನದ ಆರ್‌.ಸಿ ರಸ್ತೆಯಲ್ಲಿ ಮಾವಿನ ಹಣ್ಣು ಮಾರಾಟಕ್ಕೆ ಇಟ್ಟಿರುವುದು   

ಹಾಸನ: ಹಣ್ಣುಗಳ ರಾಜ ಮಾವಿನ ಹಣ್ಣು ನಗರದ ಮಾರುಕಟ್ಟೆಗೆ ಕಳೆದೆರಡು ವಾರದಿಂದ ಲಗ್ಗೆ ಇಟ್ಟಿದ್ದು, ಬೆಲೆ ತುಸು ಹೆಚ್ಚಾಗಿದ್ದರೂ ವ್ಯಾಪಾರ ಜೋರಾಗಿ ನಡೆದಿದೆ.

ನಗರದ ಕಟ್ಟಿನಕರೆ ಮಾರುಕಟ್ಟೆ, ಆರ್‌.ಸಿ ರಸ್ತೆ, ಶಂಕರ ಮಠ ರಸ್ತೆ, ಕಸ್ತೂರ ಬಾ ರಸ್ತೆ, ಸಾಲಗಾಮೆ ರಸ್ತೆ, ಕ್ರೀಡಾಂಗಣ ಬಳಿ ಸೇರಿದಂತೆ ನಗರದ ಬಡಾವಣೆಗಳಲ್ಲಿ ತಳ್ಳುವ ಗಾಡಿಗಳಲ್ಲಿ ವಿವಿಧ ತಳಿಗಳ ಮಾವಿನ ಹಣ್ಣು ಮಾರಾಟಕ್ಕೆ ಇಟ್ಟಿರುವುದನ್ನು ಕಾಣಬಹುದು.

ಸಾಲಗಾಮೆ, ರಾಜಘಟ್ಟ, ಹೇಮಾವತಿ ನಗರ ಬಡಾವಣೆಯ ವರ್ತಕರು ರಸ್ತೆ ಬದಿ ಅಂಗಡಿ ಹಾಗೂ ತಳ್ಳುವ ಗಾಡಿಗಳಲ್ಲಿ ಜೋಡಿಸಿಟ್ಟಿರುವ ಹಣ್ಣುಗಳು ನೋಡುಗರನ್ನು ಆಕರ್ಷಿಸುತ್ತವೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ರಸಪೂರಿ, ಅಲ್ಫಾನ್ಸೊ, ಮಲ್ಲಿಕಾ, ನಾಟಿ, ತೋತಾಪುರಿ ಹಣ್ಣುಗಳು ಸಿಗುತ್ತವೆ. ಬಾದಾಮಿ ಕೆ.ಜಿ ₹ 80, ರಸಪೂರಿ ₹ 50 ರಿಂದ 70, ಮಲಗೋಬಾ ₹ 80ರಂತೆ ಮಾರಾಟವಾಗುತ್ತಿವೆ. ತುಸು ದುಬಾರಿಯಾದರೂ ಗ್ರಾಹಕರು ಚೌಕಾಸಿ ಮಾಡಿ ಖರೀದಿಸುತ್ತಿದ್ದಾರೆ.

ADVERTISEMENT

ಮಾವಿನ ಹಣ್ಣುಗಳನ್ನು ಅರಸೀಕೆರೆ, ಹಳೇಬೀಡು, ಬೇಲೂರು, ಅಡಗೂರು, ಹಾರನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ರಾಮನಗರ ಮತ್ತು ಶ್ರೀನಿವಾಸಪುರ, ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಹಾಸನ ಮಾರುಕಟ್ಟೆಗೆ ಹಣ್ಣು ಪೂರೈಕೆ ಆಗುತ್ತಿದೆ.

ವ್ಯಾಪಾರಿಗಳು ಮಾವಿನ ತೋಟಕ್ಕೆ ಹೋಗಿ ಹಣ್ಣುಗಳನ್ನು ಖರೀದಿಸಿ ತರುತ್ತಾರೆ. ಉಳಿದಂತೆ ಎಪಿಎಂಸಿ ಮಾರುಕಟ್ಟೆಗೆ ಹೋಗಿ ಖರೀದಿ ಮಾಡಲಾಗುತ್ತದೆ. ರೈತರೇ ನೇರವಾಗಿ ಹಣ್ಣನ್ನು ಮಾರುಕಟ್ಟೆಗೆ ತಂದು ವ್ಯಾಪಾರ ಮಾಡುವುದು ಉಂಟು.

ಮದುವೆ, ಗೃಹಪ್ರವೇಶ, ನಾಮಕರಣ ಹಾಗೂ ಇತರೆ ಶುಭ ಕಾರ್ಯಗಳು ಹೆಚ್ಚು ನಡೆಯುತ್ತಿದ್ದು, ಶುಭ ಕಾರ್ಯಗಳಿಗೆ ಬರುವ ಜನರಿಗೆ ಹಲವು ಕಡೆ ಮಾವಿನ ಹಣ್ಣುಗಳನ್ನು ಕೊಡಲಾಗುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ದರದಲ್ಲಿ ಖರೀದಿಸಲಾಗುತ್ತದೆ.

‘ಕಳೆದ ಕೆಲವು ದಿನಗಳಿಂದಲೂ ಬಿಸಿಲು ಹೆಚ್ಚಾಗಿದ್ದ ಪರಿಣಾಮ ಮಾವಿನ ಹಣ್ಣಿನ ಮಾರಾಟ ಕಡಿಮೆ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಹಣ್ಣುಗಳು ಮಾರುಕಟ್ಟೆಗೆ ಹೆಚ್ಚು ಪೂರೈಕೆ ಆಗುತ್ತಿದೆ. ವ್ಯಾಪಾರವೂ ಚೆನ್ನಾಗಿ ಆಗುತ್ತಿದೆ’ ಎನ್ನುತ್ತಾರೆ ವ್ಯಾಪಾರಿ ಗೌರಮ್ಮ.

‘ಮಾವಿನ ಹಣ್ಣಿನ ಕಾಲ ಆಗಿರುವುದರಿಂದ ದರ ಸ್ವಲ್ಪ ಹೆಚ್ಚಾಗಿದೆ. ವಿವಿಧ ತಳಿಗಳ ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದೇವೆ. ಉತ್ತಮ ಮಳೆಯಾದರೆ ಬೆಲೆ ಸ್ವಲ್ಪ ಕಡಿಮೆ ಆಗುತ್ತದೆ. ದಿನಕ್ಕೆ 200 ಕೆ.ಜಿ.ವರೆಗೂ ವ್ಯಾಪಾರವಾಗುತ್ತದೆ. ಗ್ರಾಹಕರು ಹೆಚ್ಚಾಗಿ ರಸಪೂರಿ ಹಣ್ಣು ಕೇಳುತ್ತಾರೆ’ ಎಂದು ಹಣ್ಣಿನ ವ್ಯಾಪಾರಿ ಮುತ್ತುರಾಜು ಹೇಳಿದರು.

ಖರೀದಿಗೂ ಮುನ್ನ ಎಚ್ಚರ

ಮಾರುಕಟ್ಟೆಯಲ್ಲಿ ಹಣ್ಣು ಖರೀದಿಸುವ ಮುನ್ನ ಗ್ರಾಹಕರು ಸ್ವಲ್ಪ ಯೋಚಿಸುವುದು ಒಳ್ಳೆಯದು. ಇಲ್ಲದಿದ್ದರೆ ರಾಸಾಯನಿಕ ಬೆರೆತ ಹಣ್ಣು ತಿಂದು ಆರೋಗ್ಯ ಕೆಡಿಸಿಕೊಳ್ಳಬೇಕಾಗುತ್ತದೆ. ಮಾವಿನ ಋತುಮಾನದ ಆರಂಭದಲ್ಲಿ ಹೆಚ್ಚು ಲಾಭ ಗಳಿಕೆಯ ದುರಾಸೆಗೆ ವರ್ತಕರು ಮಾವಿನಕಾಯಿಗಳನ್ನು ನಿಷೇಧಿತ ಕ್ಯಾಲ್ಸಿಯಂ ಕಾರ್ಬೈಡ್‌ ಎಂಬ ರಾಸಾಯನಿಕ ಬಳಸಿ ಬೇಗ ಹಣ್ಣು ಮಾಡುವ ತಂತ್ರಗಾರಿಕೆ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಕ್ಯಾಲ್ಸಿಯಂ ಕಾರ್ಬೈಡ್‌ ಸೇವನೆ ಕ್ಯಾನ್ಸರ್‌ ಕೂಡ ತರಬಲ್ಲದು ಎಂಬುದು ವೈದ್ಯರ ಆತಂಕ.

ಸರ್ಕಾರ ಕ್ಯಾಲ್ಸಿಯಂ ಕಾರ್ಬೈಡ್‌ ಬಳಕೆ ಮೇಲೆ ನಿಷೇಧ ಹೇರಿದ್ದರೂ ಮಾರುಕಟ್ಟೆಯಲ್ಲಿ ವರ್ತಕರು ಮಾತ್ರ ಕದ್ದುಮುಚ್ಚಿ ಯಥೇಚ್ಛವಾಗಿ ಅದನ್ನು ಬಳಕೆ ಮಾಡಿ ಗ್ರಾಹಕರಿಗೆ ಮರಳು ಮಾಡುವ ಕೆಲಸ ಮುಂದುವರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.