ADVERTISEMENT

ಆಲೂರು: ಕಿರಗಡಲು ಪಂಚಲಿಂಗ ದರ್ಶನ 19ರಿಂದ

ಚೋಳರ ಕಾಲದ ದೇವಾಲಯದಲ್ಲಿ ಭರದ ಸಿದ್ಧತೆ: ಧಾರ್ಮಿಕ ಕಾರ್ಯಕ್ರಮ

ಎಂ.ಪಿ.ಹರೀಶ್
Published 17 ನವೆಂಬರ್ 2025, 3:02 IST
Last Updated 17 ನವೆಂಬರ್ 2025, 3:02 IST
ಕಿರಣ್
ಕಿರಣ್   

ಆಲೂರು: ತಲಕಾಡಿನ ಪಂಚಲಿಂಗ ದರ್ಶನ ನಡೆಯುವ ದಿನದಂದು ತಾಲ್ಲೂಕಿನ ಕಿರಗಡಲು ಗ್ರಾಮದಲ್ಲಿಯೂ ಪಂಚಲಿಂಗ ದರ್ಶನ ಇರುತ್ತದೆ. ನ.19 ಮತ್ತು 20ರಂದು ನಡೆಯಲಿರುವ ಪಂಚಲಿಂಗ ದರ್ಶನ ಮತ್ತು ಜಾತ್ರೆಗೆ ಅದ್ದೂರಿ ಸಿದ್ಧತೆ ನಡೆದಿದೆ.

ಹಾಸನದಿಂದ ಆಲೂರು ಕಡೆಗೆ 10 ಕಿ.ಮೀ ಅಥವಾ ಆಲೂರು ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಕಿರಗಡಲು ಗ್ರಾಮ ಯಗಚಿ ನದಿ ದಡದಲ್ಲಿದೆ. ಈ ಗ್ರಾಮದ ಪಂಚಲಿಂಗಗಳು ಚೋಳರ ಕಾಲದ್ದು ಎಂದು ಹಿರಿಯರು ಹೇಳುತ್ತಾರೆ. ಗ್ರಾಮದಲ್ಲಿರುವ 400ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಪಂಚಲಿಂಗಗಳೇ ಆರಾಧ್ಯ ದೈವ.

ಇತಿಹಾಸಕಾರರ ಪ್ರಕಾರ, ಈಗಿರುವ ದೇವಾಲಯದ ಜಾಗದಲ್ಲಿ ದಟ್ಟ ಬಿದಿರು ಮೆಳೆ ಇತ್ತು. ಇಲ್ಲಿಗೆ ದನ ಕಾಯಲು ಬರುತ್ತಿದ್ದ ವ್ಯಕ್ತಿಯೊಬ್ಬ ಬಿದಿರು ಕಡಿಯುವ ಸಂದರ್ಭ ತಳಭಾಗದಲಿದ್ದ ಪಂಚಲಿಂಗದ ಪೈಕಿ ಒಂದು ಲಿಂಗಕ್ಕೆ ಬಡಿಯಿತು.

ADVERTISEMENT

ಏಟಿಗೆ ಲಿಂಗದ ಅರ್ಧ ಭಾಗ ತುಂಡಾಯಿತು. ಕಡಿದ ವ್ಯಕ್ತಿ ಅಲ್ಲೇ ಮೃತಪಟ್ಟ. ಆತನ ರಕ್ತ ಸ್ವಲ್ಪ ದೂರದವರೆಗೆ ಹರಿಯಿತು. ಸೋಜಿಗವೆಂದರೆ ರಕ್ತದ ಹರಿವು ಕೊನೆಯಾದ ಸ್ಥಳದಲ್ಲಿ ಕತ್ತರಿಸಿದ ಲಿಂಗದ ಭಾಗ ಮತ್ತೆ ಉದ್ಭವವಾಯಿತು. ಅರ್ಧ ಲಿಂಗದ ಒಡಮೂಡಿದ ಭಾಗ ಇಂದಿಗೂ ಇದ್ದು, ಪೂಜಿಸಲಾಗುತ್ತಿದೆ.

ಒಂದೇ ಸ್ಥಳದಲ್ಲಿರುವ ಪಂಚ ಲಿಂಗಗಳಿಗೆ ಸೂಜಿಗಯ್ಯ, ದೊಡ್ಡಯ್ಯ, ರುದ್ರೇಶ್ವರ, ಸರ್ವೇಶ್ವರ ಮತ್ತು ಗಂಡಸಿಯಯ್ಯ ಎಂಬ ಹೆಸರು ಇದೆ. ಸದ್ಯೋಜಾತ, ವಾಸುದೇವ, ಅಘೋರ, ತತ್ಪುರುಷ, ಈಶಾನ ಎಂಬ ಶಿವನ ಪಂಚಮುಖಗಳಿವೆ. ಈ ಐದು ರೂಪಗಳಿಂದ ಆತ ಸೃಷ್ಟಿ, ಸ್ಥಿತಿ, ಲಯ, ತಿರೋಧಾನ, ಮತ್ತು ಅನುಗ್ರಹ ಎಂಬ ಪಂಚ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾನೆ ಎಂಬ ವಾಡಿಕೆ ಇದೆ.

ಇಷ್ಟೆಲ್ಲ ವಿಶೇಷತೆ ಹೊಂದಿರುವ ದೇವಸ್ಥಾನ ಇದೀಗ ಹೊಸ ರೂಪ ಪಡೆದುಕೊಂಡಿದ್ದು, ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತಿದೆ. ಈ ಮೂಲಕ ತಲಕಾಡಿನ ಪಂಚಲಿಂಗ ದರ್ಶನ ವೈಭವವನ್ನು ಜಿಲ್ಲೆಯಲ್ಲೇ ನೋಡುವ ಅವಕಾಶವಿದೆ. ಈ ಅಪರೂಪದ ಸ್ಥಳಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಪ್ರವಾಸಿಗರ ತಾಣವನ್ನಾಗಿ ಮಾಡಬೇಕು ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಆಲೂರು ತಾಲ್ಲೂಕಿನ ಕಿರಗಡಲು ಗ್ರಾಮದಲ್ಲಿರುವ ಪಂಚಲಿಂಗ ದೇವರು

ಗ್ರಾಮದಲ್ಲಿ ಪಂಚಲಿಂಗ ದರ್ಶನದ ಅಂಗವಾಗಿ 2 ದಿನ ವಿಶೇಷ ಪೂಜೆ ಜರುಗುತ್ತವೆ. ಗ್ರಾಮದ ಹೆಣ್ಣು ಮಕ್ಕಳು ಕಳಸ ಹೊತ್ತು ರಾತ್ರಿ ಕಳೆಯುವುದು ವಿಶೇಷ. ಭಕ್ತಿರಿಗೆಲ್ಲ ಅನ್ನದಾನದ ವ್ಯವಸ್ಥೆ ಇದೆ

- ಕಿರಣ್ ಕಿರಗಡಲು ಗ್ರಾಮಸ್ಥ

ವಿವಿಧ ಕಾರ್ಯಕ್ರಮ ಕಾರ್ತೀಕ ಮಾಸದ ಅಂಗವಾಗಿ ನ.19 ರಾತ್ರಿ ಜಂಪೋತ್ಸವ ಸುಗ್ಗಿ ಕುಣಿತ ನಂದಿಧ್ವಜ ಕುಣಿತ ಯುವಕರು ದೇವರ ವಿಗ್ರಹಗಳನ್ನು ಧರಿಸಿ ಸುಗ್ಗಿ ಕುಣಿತ ಮಾಡುತ್ತಾರೆ. ದೇವಸ್ಥಾನದ ಎದುರು ರಾತ್ರಿಯಿಡೀ ಹೆಣ್ಣು ಮಕ್ಕಳಿಗೆ ಕಾಳಮ್ಮನ ಕಳಸ ಹೊರಿಸಿ ದೀಪಗಳೊಂದಿಗೆ ದಿನರಾತ್ರಿ ಕಳೆಯುತ್ತಾರೆ. ನ.20ರಂದು ಮಧ್ಯಾಹ್ನ ನಡೆಯುವ ಕೆಂಡೋತ್ಸವದ ಮೊದಲು ಬೆಳಿಗ್ಗೆ ಯಗಚಿ ನದಿಯಲ್ಲಿ ಗಂಗಾಪೂಜೆ ತೀರ್ಥಸ್ನಾನ ಸಮೇತ ನಂದಿಧ್ವಜ ಕುಣಿತ ಭದ್ರಕಾಳಮ್ಮನ ಕಳಸ ವೀರಭದ್ರೇಶ್ವರ ಮತ್ತು ದಕ್ಷಬ್ರಹ್ಮದೇವರ ಅಡ್ಡೆಯೊಂದಿಗೆ ತೆರಳುತ್ತಾರೆ.  ಡಿ.20ರಂದು ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಕಿರಗಡಲು ಗ್ರಾಮಕ್ಕೆ ಆಲೂರಿನಿಂದ ಸಾರಿಗೆ ಬಸ್ ವ್ಯವಸ್ಥೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.