
ನುಗ್ಗೇಹಳ್ಳಿ: ವಿದ್ಯಾರ್ಥಿಗಳು ಮೊಬೈಲ್ ಬಳಕೆ ಹೆಚ್ಚು ಮಾಡುತ್ತಿರುವುದರಿಂದ ಅವರ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಮೊಬೈಲ್ ವ್ಯಾಮೋಹ ಬಿಟ್ಟು ಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವಂತೆ ಪದ್ಮಶ್ರೀ ಪುರಸ್ಕೃತೆ ‘ಮಾತಾ’ ಬಿ. ಮಂಜಮ್ಮ ಜೋಗತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹೋಬಳಿಯ ಹೊನ್ನ ಮಾರನಹಳ್ಳಿ ಗ್ರಾಮದಲ್ಲಿ ಕೋಟೆ ಮನೆ ಇಂಟರ್‌ನ್ಯಾಷನಲ್ ಸ್ಕೂಲ್‌ನ ಕೋಟೆ ಮನೆ ಕಲೋತ್ಸವ, ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ, ಧರ್ಮ, ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸಬೇಕು. ಆಗ ಮಾತ್ರ ಬದುಕಿನಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳಲು ಸಾಧ್ಯ. ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಸಲುವಾಗಿ ತಂದೆ ತಾಯಿಗಳು ತಮ್ಮ ಬದುಕನ್ನೇ ಧಾರೆ ಎರೆಯುತ್ತಾರೆ. ಅವರ ಕಷ್ಟಗಳನ್ನು ಅರಿತು ಓದಿನ ಕಡೆ ಮಕ್ಕಳು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
‘ನನ್ನ ಬದುಕಿನಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದು ಸಮಾಜದಲ್ಲಿನ ಶೋಷಣೆಗಳು, ಅವಮಾನಗಳನ್ನು ಎದುರಿಸಿದ್ದೇನೆ. ನನ್ನ ಗುರುಗಳು ನನ್ನನ್ನು ತಿದ್ದುವ ಮೂಲಕ ಇಂದು ಸಮಾಜದಲ್ಲಿ ಪ್ರಮುಖ ವ್ಯಕ್ತಿಯನ್ನಾಗಿ ಮಾಡಿದ್ದಾರೆ. ಈ ಕಾರಣದಿಂದಲೇ ನಾನು ಈಗಾಗಲೇ ಅನೇಕ ಪುಸ್ತಕಗಳನ್ನು ಬರೆಯುವ ಮೂಲಕ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಹೆಸರು ಮಾಡಲು ಕಾರಣವಾಗಿದೆ. ನನ್ನ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ’ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಶ್ರೀ ಕೋಟೆಮನೆ ಇಂಟರ್‌ನ್ಯಾಷನಲ್ ಸ್ಕೂಲ್ ಪೋಷಕರಿಂದ ಕಡಿಮೆ ಶುಲ್ಕ ಪಡೆದು ಈ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ತಿಳಿಸಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಹೋಬಳಿ ಕೇಂದ್ರದಲ್ಲಿ ಕಳೆದ 4 ವರ್ಷಗಳಿಂದ ಕೋಟೆ ಮನೆ ಇಂಟರ್‌ನ್ಯಾಷನಲ್ ಸ್ಕೂಲ್ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಶಾಲೆಯಲ್ಲಿ 650 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರೆ ಶಾಲಾ ಆಡಳಿತ ಮಂಡಳಿಯ ಪರಿಶ್ರಮ ಕಾರಣ. ಮಕ್ಕಳ ಬದುಕು ಶಿಕ್ಷಣದಿಂದ ಮಾತ್ರ ರೂಪುಗೊಳ್ಳಲು ಸಾಧ್ಯ. ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಉತ್ತಮ ರ್‍ಯಾಂಕ್ ಪಡೆಯುವಂತೆ ಸಲಹೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ಮಹಾನಗರಗಳಲ್ಲಿ ಖಾಸಗಿ ಶಾಲೆಗಳಲ್ಲಿ ನೀಡುತ್ತಿರುವ ಶಿಕ್ಷಣವನ್ನು ಗ್ರಾಮೀಣ ಪ್ರದೇಶದಲ್ಲಿ ಕೋಟೆ ಮನೆಯಂತಹ ಶಾಲೆ ನೀಡುತ್ತಿರುವುದು ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಲು ಸಾಧ್ಯವಾಗಿದೆ ಎಂದರು.
ಸಮಾಜ ಸೇವಕ ಜೋಡಿಗಟ್ಟೆ ಕೃಪಾ ಶಂಕರ್ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಕಂಪ್ಯೂಟರ್ ಶಿಕ್ಷಣದ ಜೊತೆಗೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಲು ಉತ್ತಮ ಗ್ರಂಥಾಲಯದ ವ್ಯವಸ್ಥೆ ಸೇರಿ ಅನೇಕ ಸೌಲಭ್ಯಗಳನ್ನು ಮಕ್ಕಳಿಗೆ ಕಲ್ಪಿಸಲಾಗಿದೆ. ಇದರಿಂದ ಮಕ್ಕಳು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಉತ್ತಮ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ದೀಪಾ, ಬಿಆರ್‌ಸಿ ಅನಿಲ್, ಡಾ. ನಾಗೇಶ್, ಹೋಬಳಿ ಇಸಿಒ ಕರಿಯಪ್ಪಗೌಡ, ಸಿಆರ್‌ಪಿ ಮಂಜೇಗೌಡ, ಕೋಟೆ ಮನೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಂಗಾಧರೇಗೌಡ, ಕಾರ್ಯದರ್ಶಿ ಮಧು ಕುಮಾರ್, ಮುಖ್ಯ ಶಿಕ್ಷಕಿ ಪವಿತ್ರ ಡಿ. ಮಧು ಕುಮಾರ್, ಮುಖಂಡರಾದ ಇಂದಿರಾ ಕ್ಯಾಂಟೀನ್ ತಿಮ್ಮೇಗೌಡ, ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ದೊರೆಸ್ವಾಮಿ, ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ಶಾಲೆಯ ಶಿಕ್ಷಕ ವೃಂದ ಹಾಗೂ ಪೋಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.