ADVERTISEMENT

ಕಸಾಪದಲ್ಲಿ ಬೃಹತ್‌ ರಕ್ತದಾನ ಶಿಬಿರ

ಸ್ವಯಂ ಪ್ರೇರಿತರಾಗಿ ದಾನ ಮಾಡಿ, ಬಡ ಜನರ ಜೀವ ಉಳಿಸಲು ಕರೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 14:32 IST
Last Updated 7 ಜೂನ್ 2019, 14:32 IST
ಹಾಸನ ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್‌ ಅವರು ಸಂಘ, ಸಂಸ್ಥೆ ಪ್ರತಿನಿಧಿಗಳ ಸಭೆ ನಡೆಸಿದರು.
ಹಾಸನ ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್‌ ಅವರು ಸಂಘ, ಸಂಸ್ಥೆ ಪ್ರತಿನಿಧಿಗಳ ಸಭೆ ನಡೆಸಿದರು.   

ಹಾಸನ: ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ಜೂನ್‌ 15 ರಂದು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲು ತೀರ್ಮಾನಿಸಲಾಯಿತು.

ಉಪವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್ ಅಧ್ಯಕ್ಷತೆಯಲ್ಲಿ ವಿಶ್ವ ರಕ್ತದಾನ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ರೆಡ್ ಕ್ರಾಸ್ ಸಂಸ್ಥೆ ಜೊತೆಗೆ ವಿವಿಧ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ಶಿಬಿರ ಆಯೋಜಿಸಲು ನಿರ್ಧರಿಸಲಾಯಿತು.

ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ.ಮೋಹನ್ ಮಾತನಾಡಿ, ಯುವ ಸಮುದಾಯ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಬಡಜನರ ಜೀವ ಉಳಿಸಬೇಕು. ಎಚ್.ಎಲ್. ನಾಗರಾಜ್ ಅವರು ಸರ್ಕಾರಿ ಸೇವೆ ಜೊತೆಗೆ ವಿವಿಧ ಸಂಘ, ಸಂಸ್ಥೆಗಳ ಒಡನಾಟದೊಂದಿಗೆ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಎಚ್.ಎಲ್. ನಾಗರಾಜ್ ಮಾತನಾಡಿ, ‘ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಅಗತ್ಯವಿರುವ ರಕ್ತವನ್ನು ಪೂರೈಸುವ ನಿಟ್ಟಿನಲ್ಲಿ ರೆಡ್‍ಕ್ರಾಸ್ ಸಂಸ್ಥೆಯು ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ರಕ್ತ ಸಂಗ್ರಹಿಸಿ ಸರ್ಕಾರಿ ಆಸ್ಪತ್ರೆ ರಕ್ತನಿಧಿ ಕೇಂದ್ರಕ್ಕೆ ನೀಡುವುದರಿಂದ ಬಡ ಜನರಿಗೆ ಸಹಕಾರಿಯಾಗಲಿದೆ’ ಎಂದು ನುಡಿದರು.

ADVERTISEMENT

ಮನುಷ್ಯನ ಜೀವನ ಅತ್ಯಮೂಲವಾದದ್ದು, ಜನರಿಗೆ ತುರ್ತು ಸಂದರ್ಭದಲ್ಲಿ ಅಗತ್ಯ ರಕ್ತ ದೊರಕದೆ ಜೀವ ಹಾನಿಯಾಗುವ ಸಂಭವವಿರುತ್ತದೆ. ಸಂಕಷ್ಟದಲ್ಲಿ ಸಿಲುಕಿರುವ ಜೀವ ಉಳಿಸಲು ಉಚಿತ ಆರೋಗ್ಯವಂತ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ರಕ್ತದಾನ ಮಾಡುವವರೆಲ್ಲರಿಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸಲಾಗವುದು. ರಕ್ತದಾನಿಗಳು ತಮ್ಮ ಆಧಾರ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್‍ಗಳನ್ನು ಕಡ್ಡಾಯವಾಗಿ ತರಬೇಕು. ರಕ್ತದಾನ ಮಾಡುವವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನೊಳಗೊಂಡ ವಿವರ ಪಟ್ಟಿಯನ್ನು ಸಂಘ, ಸಂಸ್ಥೆಗಳು ಜೂನ್ 10ರೊಳಗೆ ನೀಡಬೇಕು. ಶಿಬಿರದಲ್ಲಿ ಆಹಾರ ಮತ್ತು ಆರೋಗ್ಯ ಕುರಿತು ಉಪನ್ಯಾಸ ಆಯೋಜನೆ, ಅಪೌಷ್ಟಿಕತೆಗೆ ಕಾರಣ ಮತ್ತು ಪೌಷ್ಟಿಕ ಆಹಾರ ಸೇವನೆ ಬಗ್ಗೆ ಜನರಿಗೆ ಹೆಚ್ಚಿನ ತಿಳುವಳಿಕೆ ಮೂಡಿಸುವುದರ ಜೊತೆಗೆ ರಕ್ತದಾನದ ಲಾಭಗಳ ಬಗ್ಗೆ ಬೆಳಕು ಚೆಲ್ಲಬೇಕು ಎಂದರು.

ಡಾ. ನಾಗಲಕ್ಷ್ಮಿ ಮಾತನಾಡಿ, ರಕ್ತ ದಾನದಿಂದ ಆರೋಗ್ಯಕ್ಕೆ ಹಲವಾರು ಅನುಕೂಲಗಳಿದೆ. ರಕ್ತದೊತ್ತಡ, ಶುಗರ್, ಥೈರಾಯಿಡ್, ಮೂರ್ಛೆ ರೋಗ ಹಾಗೂ ಇತರೆ ಆರೋಗ್ಯ ಸಮಸ್ಯೆ ಇರುವವರು ರಕ್ತದಾನ ಮಾಡುವಂತಿಲ್ಲ, 18 ರಿಂದ 60 ವರ್ಷ ವಯಸ್ಸಿನವರಾಗಿದ್ದು, 50 ಕೆ.ಜಿ ತೂಕ ಹೊಂದಿರಬೇಕು, ಆರೋಗ್ಯವಂತರಾಗಿದ್ದು 12 ಗ್ರಾಂ ಹಿಮೋಗ್ಲೋಬಿನ್ ಹೊಂದಿರಬೇಕು ಎಂದು ತಿಳಿಸಿದರು.

ರೆಡ್ ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಡಾ. ಗುರುರಾಜ್ ಹೆಬ್ಬಾರ್, ಸಂಜೀವಿನಿ ಆಸ್ಪತ್ರೆ ಕಾರ್ಯದರ್ಶಿ ಪಾಷ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಜಯ್, ಅನುಗನಾಳ್ ಕೃಷ್ಣ ಮೂರ್ತಿ, ಮಲ್ಲಿಕಾರ್ಜನ್ ಹಾಗೂ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.