ADVERTISEMENT

ಕೆಎಸ್‌ಆರ್‌ಟಿಸಿ ಖಾಸಗೀಕರಣಕ್ಕೆ ಹುನ್ನಾರ: ಆರೋಪ

ದಸಂಸ ಜಿಲ್ಲಾ ಸಂಚಾಲಕ ಎಚ್‌.ಕೆ. ಸಂದೇಶ್ ಆರೋಪ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 12:08 IST
Last Updated 15 ಏಪ್ರಿಲ್ 2021, 12:08 IST
ಎಚ್.ಕೆ.ಸಂದೇಶ್
ಎಚ್.ಕೆ.ಸಂದೇಶ್   

ಹಾಸನ: ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ಬೆಂಬಲಿಸಿ ಏ. 16 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಕೆ. ಸಂದೇಶ್ ಹೇಳಿದರು.

ಆರನೇ ವೇತನ ಆಯೋಗ ಶಿಫಾರಸು ಜಾರಿಗೆ ಆಗ್ರಹಿಸಿ 9 ದಿನಗಳಿಂದ ಕರ್ತವ್ಯಕ್ಕೆ ಗೈರಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಸಮಸ್ಯೆ ಕೇಳುತ್ತಿಲ್ಲ. ದೇಶದಲ್ಲೇ ಕೆಎಸ್‌ಆರ್‌ಟಿಸಿ ಗೆ ಉತ್ತಮ ಹೆಸರಿದೆ. ಆದರೆ, ರಾಜ್ಯ ಸರ್ಕಾರ ಸಾರಿಗೆ ವ್ಯವಸ್ಥೆಯನ್ನು ಖಾಸಗಿಯವರಿಗೆ ನೀಡುವ ಉದ್ದೇಶದಿಂದ ಹಠ ಮಾರಿತನ ಮುಂದುವರಿಸುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸರ್ಕಾರಿ ನೌಕರರು ಮತ್ತು ನಿಗಮ ಮಂಡಳಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು 6ನೇ ವೇತನ ಪಡೆಯಲು ಅರ್ಹರಾಗಿದ್ದಾರೆ. ಅವರಿಗಿಂತಲೂ ಹೆಚ್ಚು ಅವಧಿ ಕೆಲಸ ಮಾಡುವ ಕೆಎಸ್‌ಆರ್‌ಟಿಸಿ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸದಿರಲು ಕಾರಣವೇನು? ಮಠ, ಮಂದಿರಗಳಿಗೆ ಸಾವಿರಾರು ಕೋಟಿ ರೂಪಾಯಿ ಕೊಡುಗೆ ನೀಡುವ ಸರ್ಕಾರ ಸಾರಿಗೆ ಸಂಸ್ಥೆ ನೌಕರರ ಬೇಡಿಕೆ ಈಡೇರಿಸಲು ಹಿಂದೇಟು ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.

ADVERTISEMENT

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ. ಅನ್ಯಾಯಕ್ಕೆ ಒಳಗಾದವರ ಪರವಾಗಿ ಹೋರಾಟ ನಡೆಸುವುದರಲ್ಲಿ ಯಾವ ತಪ್ಪಿಲ್ಲ. ಹೋರಾಟಗಾರರು ರಾಜಕಾರಣಗಳಿಂದ ದುಡ್ಡು ಪಡೆದು ಮುಷ್ಕರ ನಡೆಸುತ್ತಿದ್ದರೆ ಅಂತವರ ವಿರುದ್ಧ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಕೆ. ಈರಪ್ಪ, ಎಚ್.ಎಸ್‌. ನಾಗರಾಜು, ಕೃಷ್ಣದಾಸ್, ಚೌಡುವಳ್ಳಿ ಜಗದೀಶ್, ಎಚ್.ಪಿ. ಪುಟ್ಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.