ADVERTISEMENT

ಕುಂದೂರು: ಸುಬ್ರಹ್ಮಣ್ಯೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 2:53 IST
Last Updated 27 ನವೆಂಬರ್ 2025, 2:53 IST
ಚನ್ನರಾಯಪಟ್ಟಣ ತಾಲ್ಲೂಕು ಕುಂದೂರು ಆದಿಚುಂಚನಗಿರಿ ಮಠದಲ್ಲಿ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಜರುಗಿತು
ಚನ್ನರಾಯಪಟ್ಟಣ ತಾಲ್ಲೂಕು ಕುಂದೂರು ಆದಿಚುಂಚನಗಿರಿ ಮಠದಲ್ಲಿ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಜರುಗಿತು    

ಚನ್ನರಾಯಪಟ್ಟಣ: ಇತಿಹಾಸ ಪ್ರಸಿದ್ದ ಶ್ರೀಕ್ಷೇತ್ರ ಕುಂದೂರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಷಷ್ಠಿ ಅಂಗವಾಗಿ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ರಥೋತ್ಸವ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

ಉತ್ಸವ ಮೂರ್ತಿಯನ್ನು ಕ್ಷೇತ್ರದಲ್ಲಿರುವ ಈಶ್ವರ, ರಂಗನಾಥಸ್ವಾಮಿ, ಸುಬ್ರಹ್ಮಣ್ಯೇಶ್ವರಸ್ವಾಮಿ ದೇಗುಲದಲ್ಲಿ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಲಾಯಿತು. ಮಂಗಳವಾದ್ಯದ ನಾದದೊಂದಿಗೆ ಮೆರವಣೆಗೆಯಲ್ಲಿ ಕರೆತಂದು ರಥದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಆದಿಚುಂಚನಗಿರಿ ಶಾಖಾ ಮಠಾಧೀಶ ಶಂಭುನಾಥ ಸ್ವಾಮೀಜಿ ಪೂಜೆ ಸಲ್ಲಿಸಿದರು. ರಥೋತ್ಸವದಲ್ಲಿ ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಭಾಗವಹಿಸಿದ್ದರು. ಭಕ್ತರು ಘೋಷಣೆ ಮೊಳಗಿಸುತ್ತ ತೇರು ಎಳೆದರು. ಭಕ್ತರು ತೇರಿನ ಕಳಸದತ್ತ ಬಾಳೆಹಣ್ಣು ಎಸೆದು ಭಕ್ತಿಯಿಂದ ನಮಿಸಿದರು. ತಂಬಿಟ್ಟಿನ ಆರತಿ ಹೊತ್ತ ಮಹಿಳೆಯರು ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಷಷ್ಠಿಯಂದು ಭಕ್ತರು ಉಪವಾಸವಿದ್ದು, ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿರುವ ಹುತ್ತಕ್ಕೆ ತೆನೆ ಎರೆದು ರಥೋತ್ಸವದಲ್ಲಿ ಪಾಲ್ಗೊಂಡ ಬಳಿಕ ಉಪವಾಸ ಅಂತ್ಯಗೊಳಿಸಿದರು.

ADVERTISEMENT

ರಥೋತ್ಸವದ ಬಳಿಕ ಸರ್ಪ ವಾಹನೋತ್ಸವ ಜರುಗಿತು. ಕುಂದೂರು, ಚೌಳಗಾಲ, ಅಗ್ರಹಾರ, ಅಂಕೇನಹಳ್ಳಿ, ಮೂಡನಹಳ್ಳಿ, ಗ್ಯಾರಹಳ್ಳಿ, ದೊಡ್ಡಕರಡೆ, ಚಿಕ್ಕಕರಡೆ, ತಿಮ್ಮಲಾಪುರ ಸೇರಿ ಅನೇಕ ಹಳ್ಳಿಗಳ ಭಕ್ತರು ಪಾಲ್ಗೊಂಡಿದ್ದರು.

ಗುರುವಾರ ರಂಗನಾಥಸ್ವಾಮಿಯ ರಥೋತ್ಸವ, ಗರುಡ ವಾಹನೋತ್ಸವ ಮತ್ತು ರಂಗನಾಥಸ್ವಾಮಿಯ ದೇವರ ಉತ್ಸವ ಜರುಗಲಿವೆ. ಶುಕ್ರವಾರ ಕುಂದೂರು ಮಹಾಸಂಸ್ಥಾನದ ಮಠದ ಹಿಂದಿನ ಪೀಠಾಧ್ಯಕ್ಷರ ಪುಣ್ಯರಾಧನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.