ADVERTISEMENT

ಹಾಸನ | ಜಮೀನು ವಿಚಾರ: ದೊಣ್ಣೆಯಿಂದ ಹೊಡೆದು ಕೊಲೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 16:16 IST
Last Updated 13 ಏಪ್ರಿಲ್ 2025, 16:16 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಹಾಸನ: ತಾಲ್ಲೂಕಿನ ಕೋಡರಾಮನಹಳ್ಳಿ ಗ್ರಾಮದಲ್ಲಿ ಜಮೀನಿನ ವಿಚಾರಕ್ಕೆ ವೃದ್ಧರೊಬ್ಬರನ್ನು ಹೊಡೆದು ಕೊಲೆ ಮಾಡಲಾಗಿದೆ. ಗ್ರಾಮದ ಕರಿಗೌಡ (75) ಕೊಲೆಯಾದವರು. ಪಕ್ಕದ ಜಮೀನಿನ ಮಾಲೀಕ ಮಂಜೇಗೌಡ ಕೊಲೆ ಮಾಡಿದ ಆರೋಪಿ.

ಕರಿಗೌಡರು ಶನಿವಾರ ಜಮೀನಿನ ಬಳಿ ತೆರಳಿದ್ದರು. ಈ ವೇಳೆ ಪಕ್ಕದ ಜಮೀನಿನ ಮಂಜೇಗೌಡ, ಜೆಸಿಬಿಯಿಂದ ಕರಿಗೌಡರ ಜಮೀನಿನ ಬದುವಿನ ಮಣ್ಣು ತೆಗೆಯುತ್ತಿದ್ದ. ಅದಕ್ಕೆ ಕರಿಗೌಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಸಿಟ್ಟಿಗೆದ್ದ ಮಂಜೇಗೌಡ, ಕರಿಗೌಡರನ್ನು ದೊಣ್ಣೆಯಿಂದ ಹೊಡೆದು, ಕಾಲಿನಿಂದ ತುಳಿದಿದ್ದ. ಜಮೀನಿನ ವಿಚಾರಕ್ಕೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.

ADVERTISEMENT

ಈ ಬಗ್ಗೆ ಕರಿಗೌಡರು ತಮ್ಮ ಸೊಸೆಗೆ ಕರೆಮಾಡಿ ವಿಷಯ ತಿಳಿಸಿದ್ದರು. ಅವರ ಸೊಸೆ ಜಮೀನಿನ ಹತ್ತಿರ ಹೋಗಿ ಪೊಲೀಸರು ಹಾಗೂ ಊರಿನವರ ಸಹಾಯದಿಂದ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅಷ್ಟರಲ್ಲಿಯೇ ಕರಿಗೌಡರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

ಈ ಕುರಿತು ಕರಿಗೌಡರ ಸೊಸೆ ಪವಿತ್ರ ಎಚ್.ಟಿ. ಗೊರೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

₹2.49 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಹಾಸನ: ಅರಸೀಕೆರೆಯ ರೈಲ್ವೆ ಕ್ವಾಟರ್ಸ್‌ನ ಬೀಗ ಮುರಿದು, ₹2.49 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ಧೀರೇಂದ್ರ ಕುಮಾರ್ ಯಾದವ್‍ ರೈಲ್ವೆ ಇಲಾಖೆ ನೌಕರರಾಗಿದ್ದು, ಮಾರ್ಚ್‌ 28 ರಂದು ಹೆಂಡತಿ ಹಾಗೂ ಮಗುವನ್ನು ತಮ್ಮ ಊರಾದ ಬಿಹಾರಕ್ಕೆ ಬಿಟ್ಟು ಬರಲೆಂದು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಏ.12 ರಂದು ಅರಸೀಕೆರೆಗೆ ಬಂದು ವಸತಿಗೃಹದಲ್ಲಿ ನೋಡಿದಾಗ, ಕಳವಾಗಿರುವುದು ಗೊತ್ತಾಗಿದೆ.

12 ಗ್ರಾಂನ ಚಿನ್ನದ ಓಲೆ, 18 ಗ್ರಾಂನ 3 ಚಿನ್ನದ ಉಂಗುರ, 2 ಗ್ರಾಂನ 3 ಚಿನ್ನದ ಮೂಗುತಿ, 2 ಗ್ರಾಂನ ಚಿನ್ನದ ಡಾಲರ್, 16 ಗ್ರಾಂನ ಚಿನ್ನದ ಸರ, 6 ಗ್ರಾಂನ ಓಲೆ, ) 5 ಗ್ರಾಂನ ಓಲೆ, 20 ಗ್ರಾಂ ಬೆಳ್ಳಿಯ ಕಾಲು ಚೈನ್, 60 ಗ್ರಾಂನ ಬೆಳ್ಳಿ ನಾಣ್ಯ ಕಳವು ಮಾಡಲಾಗಿದೆ. ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಳಿ, ನಗದು ಕಳವು

ಹಾಸನ: ಇಲ್ಲಿನ ಬಸವೇಶ್ವರ ನಗರದ ಮನೆಯ ಬೀಗ ಮುರಿದು, ₹35 ಸಾವಿರ ಮೌಲ್ಯದ ಬೆಳ್ಳಿಯ ಆಭರಣ ಹಾಗೂ ₹60 ಸಾವಿರ ನಗದು ಕಳವು ಮಾಡಲಾಗಿದೆ.

ನಾಗರಾಜು ಜಿ.ಕೆ. ಅವರು, ಏ.9 ರಂದು ಕುಟುಂಬ ಸಮೇತ ಸಂಬಂಧಿಕರ ಮನೆಗೆ ಹೋಗಿದ್ದು, ಏ. 10 ರಂದು ವಾಪಸ್ ಮನೆಗೆ ಬಂದಿದ್ದಾರೆ. ಅಷ್ಟರಲ್ಲಿಯೇ ಮನೆಯ ಬೀರುವಿನಲ್ಲಿದ್ದ ₹60ಸಾವಿರ ನಗದು, 150 ಗ್ರಾಂನ ಬೆಳ್ಳಿ ಕಾಲು ಚೈನ್, 30 ಗ್ರಾಂನ 2 ಬೆಳ್ಳಿ ಬಳೆ, 120 ಗ್ರಾಂನ 3 ಜೊತೆ ಬೆಳ್ಳಿ ಕುಂಕುಮದ ಬಟ್ಟಲು, 20 ಗ್ರಾಂನ ಕಾಲು ಚೈನ್, 30 ಗ್ರಾಂನ ಎರಡು ಬೆಳ್ಳಿ ಚೈನ್‍ಗಳನ್ನು ಕಳವು ಮಾಡಲಾಗಿದೆ.

ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹2.80 ಲಕ್ಷ ಮೌಲ್ಯದ ಚಿನ್ನದ ಸರ ಕಳವು

ಹಾಸನ: ಆಲೂರಿನಿಂದ ಮಗ್ಗೆಗೆ ತೆರಳುವ ಬಸ್‌ನಲ್ಲಿ ವ್ಯಕ್ತಿಯೊಬ್ಬರ ಕುತ್ತಿಗೆಯಲ್ಲಿದ್ದ ₹2.80 ಲಕ್ಷ ಮೌಲ್ಯದ ಚಿನ್ನದ ಸರ ಕಳವು ಮಾಡಲಾಗಿದೆ.

ಆಲೂರು ತಾಲ್ಲೂಕಿನ ಕೆ.ಹೊಸಹಳ್ಳಿ ಗ್ರಾಮದ ಗುರುರಾಜ್ ಎಚ್.ಎಸ್. ಅವರು ಆಲೂರಿನಿಂದ ತಮ್ಮ ಊರಾದ ಮಗ್ಗೆಗೆ ಹೋಗುವ ಕೆಎಸ್‍ಆರ್‌ಟಿಸಿ ಬಸ್ ಹತ್ತಿದ್ದಾರೆ. ಬಸ್‌ನಲ್ಲಿ ಜನದಟ್ಟಣೆ ಇದ್ದು, ಊರಿನ ಸಮೀಪದಲ್ಲಿದ್ದಾಗ ಕುತ್ತಿಗೆಗೆ ಯಾರೋ ಕೈ ಹಾಕಿದಂತೆ ಅನುಭವವಾಗಿದೆ. ಊರಿನಲ್ಲಿ ಬಸ್‌ ಇಳಿದು ನೋಡಿದಾಗ ಕುತ್ತಿಗೆಯಲ್ಲಿದ್ದ 40 ಗ್ರಾಂ ಚಿನ್ನದ ಸರ ಕಳವಾಗಿರುವುದು ಗೊತ್ತಾಗಿದೆ. ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.