
ಹಾಸನ: ರಾಜ್ಯದಲ್ಲಿ ಅತೀ ಕಡಿಮೆ ಕುಷ್ಠರೋಗ ಹೊಂದಿರುವ ಜಿಲ್ಲೆಗಳಲ್ಲಿ ಹಾಸನವೂ ಒಂದಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ತಿಳಿಸಿದರು.
ಜಿಲ್ಲೆಯಾದ್ಯಂತ ನ.24 ರಿಂದ ಡಿ.9 ರವರೆಗೆ ಆಯ್ದ ಪ್ರದೇಶಗಳಲ್ಲಿ ಹಮ್ಮಿಕೊಂಡಿರುವ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ 2025-26 ಆಂದೋಲನದ ಆರೋಗ್ಯ ಶಿಕ್ಷಣ ಮತ್ತು ಸಂವಹನದ (ಐಇಸಿ) ಪರಿಕರಗಳನ್ನು ಶುಕ್ರವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅತೀ ಕಡಿಮೆ ಕುಷ್ಠರೋಗ ಪ್ರಕರಣಗಳಿದ್ದು, 2025-26ನೇ ಸಾಲಿನಲ್ಲಿ ಕೇವಲ 6 ಪ್ರಕರಣ ಪತ್ತೆಯಾಗಿವೆ. ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಯನ್ನು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.
ಕುಷ್ಠರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದರಿಂದ ರೋಗದಿಂದಾಗುವ ಅಂಗವೈಕಲ್ಯಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಬೇರೆಯವರಿಗೆ ಹರಡುವುದನ್ನೂ ತಡೆಗಟ್ಟಬಹುದಾಗಿದೆ ಎಂದರು.
ಈ ಆಂದೋಲನದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಪುರುಷ ಸ್ವಯಂಸೇವಕರು, ತಾಲ್ಲೂಕು ಮೇಲ್ವಿಚಾರಕರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳು, ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಮೇಲ್ವಿಚಾರಕರು ಮತ್ತು ವೈದ್ಯಾಧಿಕಾರಿಗಳು ಭಾಗವಹಿಸುವರು. ಅವಶ್ಯವಿರುವ ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಈ ದಿನಗಳಲ್ಲಿ ಮನೆಗಳಿಗೆ ಭೇಟಿ ನೀಡುವ ಇಲಾಖೆ ಸಿಬ್ಬಂದಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಜನರಿಗೆ ಮನವಿ ಮಾಡಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಶಿವಶಂಕರ್ ಕೆ.ಬಿ., ಆರೋಗ್ಯ ನಿರೀಕ್ಷಕ ಅಪ್ಪಾಜಿಗೌಡ, ಜಿಲ್ಲಾ ಕಾರ್ಯಕ್ರಮ ಸಹಾಯಕ ವೆಂಕಟೇಶ್ ಬಿ.ಎಸ್. ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಕೇವಲ 3 ಪ್ರಕರಣ ಪತ್ತೆ ಈ ವರ್ಷ ಪತ್ತೆಯಾದ 6 ಕುಷ್ಠರೋಗ ಪ್ರಕರಣಗಳಲ್ಲಿ 3 ಪ್ರಕರಣಗಳು ಹೊರ ರಾಜ್ಯದ್ದಾಗಿದ್ದು ಉಳಿದ 3 ಪ್ರಕರಣಗಳು ಮಾತ್ರ ಜಿಲ್ಲೆಯದ್ದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ ಹೇಳಿದರು. 5 ವರ್ಷಗಳಲ್ಲಿ ಕುಷ್ಠರೋಗ ಪತ್ತೆಯಾಗಿದ್ದ ಊರುಗಳಲ್ಲಿ ಸಮೀಕ್ಷಾ ತಂಡವು ಮನೆ-ಮನೆಗೆ ಭೇಟಿ ನೀಡಿ ಕುಷ್ಠರೋಗದ ಚಿನ್ಹೆ ಇರುವ ವ್ಯಕ್ತಿಗಳನ್ನು ಗುರುತಿಸಿ ಸಂಭಾವ್ಯ ಕುಷ್ಠರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಕುಷ್ಠರೋಗ ಕಂಡು ಬಂದಲ್ಲಿ ಅಂತಹ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಆಂದೋಲನದ ಉದ್ದೇಶ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.