ADVERTISEMENT

ಮಾಧ್ಯಮ ಆಕರ್ಷಣೆಗಾಗಿ ಕೋಡಿ ಶ್ರೀ ಹೇಳಿಕೆ: ಶಾಸಕ ಪ್ರೀತಂ ಗೌಡ

'ಭವಿಷ್ಯ ಹೇಳುವುದನ್ನು ಸ್ವಲ್ಪ ದಿನ ನಿಲ್ಲಿಸಲಿ'

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 15:04 IST
Last Updated 21 ಸೆಪ್ಟೆಂಬರ್ 2019, 15:04 IST
ಪ್ರೀತಂ ಗೌಡ
ಪ್ರೀತಂ ಗೌಡ   

ಹಾಸನ: ‘ರಾಜ್ಯದ ಆಡಳಿತ ವಿಚಾರದಲ್ಲಿ ಮಾಧ್ಯಮದ ಆಕರ್ಷಣೆಗಾಗಿ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮನಸ್ಸಿಗೆ ಬಂದಿದ್ದನ್ನು ಹೇಳಿದ್ದಾರೆ’ ಎಂದು ಶಾಸಕ ಪ್ರೀತಮ್ ಜೆ. ಗೌಡ ಬೇಸರ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಮುಂದಿನ 15 ವರ್ಷ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರಲಿದೆ ಎಂದು ನಾನೂ ಹೇಳುತ್ತೇನೆ. ಹಿಂದೆ ಹೇಳಿರುವುದೆಲ್ಲಾ ಸತ್ಯವಾಗಿದೆ. ನಾನು ಗೆಲ್ಲುತ್ತೇನೆ ಎಂದಿದ್ದೆ. ನಮ್ಮ ಸರ್ಕಾರ ಬರಲಿದೆ ಎಂದಿದ್ದೆ. ಅದೆಲ್ಲವೂ ಆಗಿದೆ. ನನ್ನ ಭವಿಷ್ಯವಾಣಿಯನ್ನೂ ಪ್ರಚಾರ ಮಾಡಿ’ ಎಂದರು.

‘ಸ್ವಾಮೀಜಿ ಅವರು ಮಳೆ ಸಂದರ್ಭದಲ್ಲಿ ಮಳೆ ಬರುತ್ತದೆ ಎಂದಿದ್ದಾರೆ. ನಾಳೆಯೂ ಬರಲಿದೆ ಎಂದು ಹೇಳಿರುವುದನ್ನು ನಾನು ನೋಡಿಲ್ಲ. ಗಾಳಿ ಬಂದ ಕಡೆ ತೂರಿಕೊಳ್ಳುವ ರೀತಿ ಭವಿಷ್ಯ ಹೇಳಿರುವುದನ್ನು ಗಮನಿಸಿದ್ದೇನೆ. ಅವರ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ. ಆದರೆ ಮೀಡಿಯಾ ಆಕರ್ಷಣೆಗಾಗಿ ಮನಸ್ಸಿಗೆ ಬಂದಂತೆ ಮಾತನಾಡಬಾರದು. ಇನ್ನಾದರೂ ದೇವರು ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ. ಅವರ ಪಾದ ಮುಟ್ಟಿ ನಮಸ್ಕಾರ ಮಾಡಿ ಹೇಳುವೆ. ರಾಜಕೀಯವಾಗಿ ಭವಿಷ್ಯ ಹೇಳುವುದನ್ನು ಸ್ವಲ್ಪ ದಿನ ನಿಲ್ಲಿಸಿದರೆ ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯದು’ ಎಂದು ಮನವಿ ಮಾಡಿದರು.

ADVERTISEMENT

ಮುಂದೆ ಮಂತ್ರಿಯಾಗುವ ಕುರಿತ ಪ್ರಶ್ನೆಗೆ, ‘ಸಚಿವ ಏಕೆ, ಮುಖ್ಯಮಂತ್ರಿಯೂ ಆಗುತ್ತೇನೆ. ಅದಕ್ಕೆ ಕಾಲ ಕೂಡಿ ಬರಬೇಕು’ ಎಂದರು.

‘ಮಧ್ಯಂತರ ಚುನಾವಣೆ ಕುರಿತ ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕರು, ‘ತಿಂಗಳು ಲೆಕ್ಕ ಆದ್ರೆ 48 ರಿಂದ 50 ತಿಂಗಳಲ್ಲಿ ಚುನಾವಣೆ ಬರಲಿದೆ. ವರ್ಷದ ಮಾತಾದ್ರೆ 4 ವರ್ಷ ನಂತರ ಚುನಾವಣೆ ಬರಲಿದೆ. ಕಾರ್ಯಕರ್ತರಲ್ಲಿ ಹುಮ್ಮಸ್ಸು ತರಲು ಅವರು ಹೀಗೆ ಹೇಳಿರಬಹುದು. ನಾವೇನು 50 ವರ್ಷ ಅಧಿಕಾರಕ್ಕೆ ಅಂಟಿ ಕೂರುತ್ತೇವೆ ಎಂದು ಹೇಳಿಲ್ಲ. 2023ಕ್ಕೆ ಚುನಾವಣೆ ಬರಲಿದೆ. ಬಿಜೆಪಿ ಒಳ್ಳೆಯ ಕೆಲಸ ಮಾಡಿದರೆ ಜನರು ಮತ್ತೆ ಆಶೀರ್ವಾದ ಮಾಡುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಸ್ಪಷ್ಟ ಪಡಿಸಿದರು.

‘ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಸನ್ನಿಹಿತವಾಗಿದೆ. ಚುನಾವಣೆ ಪೂರ್ವದಲ್ಲಿ ಹೇಳಿದಂತೆ 18 ತಿಂಗಳಿಗೆ ಮತ್ತೆ ಚುನಾವಣೆ ಬರಲಿದೆ’ ಎಂದು ಹಾವೇರಿಯಲ್ಲಿ ಕೋಡಿಹಳ್ಳಿ ಮಠದ ಸ್ವಾಮೀಜಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.