ADVERTISEMENT

ಹಾಸನ | ಮದ್ಯದ ಉದ್ಯಮಕ್ಕೆ ಆರ್ಥಿಕ ಹೊಡೆತ

ಬಾರ್‌, ರೆಸ್ಟೋರೆಂಟ್‌ ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ, ಕಾರ್ಮಿಕರ ಬದುಕು ಅತಂತ್ರ‌‌

ಕೆ.ಎಸ್.ಸುನಿಲ್
Published 25 ಆಗಸ್ಟ್ 2020, 20:15 IST
Last Updated 25 ಆಗಸ್ಟ್ 2020, 20:15 IST
   

ಹಾಸನ: ಬಾರ್‌ ಮತ್ತು ರೆಸ್ಟೋರೆಂಟ್‌ ಆರಂಭಿಸಲು ಅನುಮತಿ ಸಿಗದ ಕಾರಣ ಮದ್ಯದ ಉದ್ಯಮಕ್ಕೆ ಆರ್ಥಿಕ ಹೊಡೆತ
ಬಿದ್ದಿದೆ. ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಿರುವುದರಿಂದ ಈ ಉದ್ಯಮನವನ್ನೇ ನಂಬಿದವರ ಬದುಕು
ಅತಂತ್ರವಾಗಿದೆ.

ಜಿಲ್ಲೆಯಲ್ಲಿ ಎಂಎಸ್‌ಐಎಲ್‌, ವೈನ್‌ ಸ್ಟೋರ್‌, ಬಾರ್‌ ಮತ್ತು ರೆಸ್ಟೋರೆಂಟ್‌, ಲಾಡ್ಜ್‌ಗಳಲ್ಲಿರುವ ಬಾರ್‌ ಮತ್ತು ರೆಸ್ಟೋರೆಂಟ್‌ ಸೇರಿ 340 ಅಂಗಡಿಗಳಿವೆ. ಸುಮಾರು 10 ಕ್ಲಬ್‌ಗಳಿವೆ.

ಮೇ ಮೊದಲ ವಾರದಿಂದ ಮದ್ಯದ ಅಂಗಡಿಗಳಲ್ಲಿ ಪಾರ್ಸೆಲ್‌ಗೆ ಮಾತ್ರವೇ ಅವಕಾಶ ನೀಡಲಾಯಿತು. ಆದರೆ ಬಾರ್‌,
ರೆಸ್ಟೋರೆಂಟ್‌ಗಳಲ್ಲಿ ಕುಳಿತು ಮದ್ಯ ಸೇವಿಸಲು ನಿರ್ಬಂಧ ಮುಂದುವರಿದಿದೆ. ಹಾಗಾಗಿ ಮದ್ಯದ ವಹಿವಾಟು ಚೇತರಿಕೆ
ಕಂಡಿಲ್ಲ. ಬಹುತೇಕ ಕಡೆ ಕಾರ್ಮಿಕರು ಕೆಲಸ ಇಲ್ಲದೆ ಸ್ವಂತ ಗ್ರಾಮಕ್ಕೆ ತೆರಳಿದ್ದಾರೆ.

ADVERTISEMENT

ಪಾರ್ಸೆಲ್‌ಗೆ ಅವಕಾಶ ನೀಡಿದ್ದರಿಂದ ಕಾರ್ಮಿಕರಿಗೆ ಸಂಬಳ ಕೊಡುವುದು ಹೊರೆಯಾಗಿ ಪರಿಣಮಿಸಿದೆ. ಬಹುತೇಕ
ಕಡೆಗಳಲ್ಲಿ ಕಾರ್ಮಿಕರ ಸಂಖ್ಯೆ ಕಡಿಮೆ ಮಾಡಲಾಗಿದೆ. ಇದರಿಂದ ಹಲವರು ಕೆಲಸ ಕಳೆದುಕೊಂಡಿದ್ದಾರೆ.

‘ಕೊರೊನಾ ಲಾಕ್‌ಡೌನ್‌ ಜಾರಿಯಾದಾಗಿನಿಂದ ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕುಳಿತು ಮದ್ಯ ಸೇವಿಸಲು ನಿರ್ಬಂಧ ವಿಧಿಸಲಾಗಿದೆ. ಎಂಆರ್‌ಪಿ ದರದಲ್ಲೇ ಮಾರಾಟ ಮಾಡಬೇಕು. ಇದರಿಂದ ಭಾರಿ ನಷ್ಟ ಉಂಟಾಗಿದೆ. ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ’ಎಂಬುದು ಬಾರ್‌ ಮಾಲೀಕರ ಅಳಲು.

‘ಬಾರ್, ರೆಸ್ಟೋರೆಂಟ್‌ಗಳ ವಹಿವಾಟಿನಲ್ಲಿ ಚೇತರಿಕೆ ಕಂಡಿಲ್ಲ. ಕಾರ್ಮಿಕರನ್ನು ಕೆಲಸದಿಂದ ತೆಗೆದರೆ ವಾಪಸ್‌ ಬರುವುದು ಕಷ್ಟ. ಲಕ್ಷಾಂತರ ರೂಪಾಯಿ ಬಾಡಿಗೆ, ವಿದ್ಯುತ್‌ ಬಿಲ್‌, ಕೆಲಸಗಾರರ ಸಂಬಳ, ಪರವಾನಗಿ ಶುಲ್ಕ ಪಾವತಿಸಲೇಬೇಕು. ಶೇಕಡಾ 50 ರಷ್ಟು ವಹಿವಾಟು ಆಗುತ್ತಿದೆ. ಸರ್ಕಾರಕ್ಕೂ ಆದಾಯ ಕಡಿಮೆ ಆಗಿದೆ. ಕುಳಿತು ಮದ್ಯ ಸೇವಿಸಲು ಅನುಮತಿ ನೀಡಿದರೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಬಾಡಿಗೆ ಕಟ್ಟಡಗಳಲ್ಲಿ ನಡೆಸುತ್ತಿರುವರ ಪರಿಸ್ಥಿತಿ ಕಷ್ಟ’ಎಂದು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಅನಿಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.