ADVERTISEMENT

ಮಹಾಕಾಳಿ ವಿಗ್ರಹ ಜೋಡಣೆ ಕಾರ್ಯ ಆರಂಭ

ಚೆನ್ನೈನಿಂದ ಬಂದಿರುವ ಇಬ್ಬರು ತಜ್ಞರು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 17:08 IST
Last Updated 23 ನವೆಂಬರ್ 2020, 17:08 IST
ಹಾಸನ ತಾಲ್ಲೂಕಿನ ದೊಡ್ಡಗದ್ದವಳ್ಳಿ ಗ್ರಾಮದ ಮಹಾಲಕ್ಷ್ಮಿ ದೇವಾಲಯಕ್ಕೆ ಪುರಾತತ್ವ ಇಲಾಖೆ ಪ್ರಾದೇಶಿಕ ನಿರ್ದೇಶಕಿ ಡಾ. ಜಿ.ಮಹೇಶ್ವರಿ ಹಾಗೂ ತಂಡದವರು ಭೇಟಿ ನೀಡಿ ಪರಿಶೀಲಿಸಿದರು.
ಹಾಸನ ತಾಲ್ಲೂಕಿನ ದೊಡ್ಡಗದ್ದವಳ್ಳಿ ಗ್ರಾಮದ ಮಹಾಲಕ್ಷ್ಮಿ ದೇವಾಲಯಕ್ಕೆ ಪುರಾತತ್ವ ಇಲಾಖೆ ಪ್ರಾದೇಶಿಕ ನಿರ್ದೇಶಕಿ ಡಾ. ಜಿ.ಮಹೇಶ್ವರಿ ಹಾಗೂ ತಂಡದವರು ಭೇಟಿ ನೀಡಿ ಪರಿಶೀಲಿಸಿದರು.   

ಹಾಸನ/ಹಳೇಬೀಡು: ಹಾಸನ ತಾಲ್ಲೂಕಿನ ದೊಡ್ಡಗದ್ದವಲ್ಲಿ ಮಹಾಲಕ್ಷ್ಮಿ ದೇವಾಲಯದ ಮಹಾಕಾಳಿ ವಿಗ್ರಹ ಜೋಡಿಸುವ ಕೆಲಸ ಸೋಮವಾರ ಆರಂಭವಾಯಿತು.

ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪ್ರಾದೇಶಿಕ ನಿರ್ದೇಶಕಿ ಜಿ.ಮಹೇಶ್ವರಿ ಹಾಗೂಮೂವರು ಅಧಿಕಾರಿಗಳ ತಂಡ ಭಗ್ನಗೊಂಡಿರುವ ವಿಗ್ರಹ ಜೋಡಣೆ ಸಂಬಂಧ ಚೆನ್ನೈನಿಂದ ಬಂದಿರುವ ಇಬ್ಬರು ಮಾಡೆಲಿಂಗ್ ತಜ್ಞರೊಂದಿಗೆ ಹಲವು ಸುತ್ತಿನ ಚರ್ಚೆನಡೆಸಿತು.

ಬಳಿಕ ತಜ್ಞರು ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಭಗ್ನಗೊಂಡಿರುವ ವಿಗ್ರಹ ಜೋಡಣೆ ಕೈಗೊಂಡರು.

ADVERTISEMENT

‘ಕಾಳಿ ವಿಗ್ರಹವನ್ನು ಮೊದಲಿನಂತೆ ಜೋಡಿಸಿದರೂ ಪೂಜೆಗೆ ಒಳಪಡುವುದಿಲ್ಲ. ವಿಗ್ರಹ ಭಿನ್ನವಾದರೆ ಪೂಜೆ ಮಾಡುವುದಿಲ್ಲ. ಬದಲಿಗೆ ಕಾಳಿ ವಿಗ್ರಹದ ರೀತಿಯಲ್ಲಿಯೇ ಮತ್ತೊಂದು ವಿಗ್ರಹ ಮಾಡಿಸಿ, ಪ್ರತಿಷ್ಠಾಪನೆ ಮಾಡಬೇಕು. ದೇವಸ್ಥಾನದಲ್ಲಿ ನಡೆಯುವಂತಹ ಧಾರ್ಮಿಕ ಕಾರ್ಯವನ್ನು ಮುಂದುವರೆಸಲು ಅವಕಾಶ ನೀಡಬೇಕು. ದೇಗುಲಕ್ಕೆ ಸಿಸಿಟಿವಿ ಕ್ಯಾಮೆರಾ, ಸೋಲಾರ್ ದೀಪ, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಗ್ರಾಮಸ್ಥರು ಪ್ರಾದೇಶಿಕ ನಿರ್ದೇಶಕಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಹೇಶ್ವರಿ, ‘ಪೀಠದಿಂದ ಸಡಿಲಗೊಂಡು ವಿಗ್ರಹ ಬಿದ್ದಿರಬಹುದು ಎಂದು ಅಂದಾಜು ಮಾಡಲಾಗಿದೆ. ಇತಿಹಾಸದ ಅಮೂಲ್ಯ ಸಾಕ್ಷಿಯನ್ನು ಉಳಿಸುವ ನಿಟ್ಟಿನಲ್ಲಿ ವಿಗ್ರಹ ಜೋಡಣೆ ಕಾರ್ಯಕ್ಕೆ ಕೈಹಾಕಿದ್ದೇವೆ. ಪೂಜಾ ಕಾರ್ಯಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ದಾರಿ ತೋರಿಸುವ ಫಲಕ ಅಳವಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು’ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

‘1992ರಿಂದ ದೇವಾಲಯಕ್ಕೆ ಮುಜಾರಾಯಿ ಇಲಾಖೆಯಿಂದ ಬರುತ್ತಿದ್ದ ತಸ್ತಿಕ್ ನಿಂತು ಹೋಗಿದೆ. ಆದರೂ ಅರ್ಚಕರು ಪೂಜೆ ಮಾಡುತ್ತಿದ್ದಾರೆ. ಮುಜರಾಯಿ ಇಲಾಖೆ ಅಧಿಕೃತವಾಗಿ ಅರ್ಚಕರ ನೇಮಕ ಮಾಡಬೇಕು ಮತ್ತು ಬಿಗಿ ಬಂದೋಬಸ್ತ್‌ ಕೈಗೊಳ್ಳಬೇಕು’ ಎಂದು ಗ್ರಾಮಸ್ಥ ಡಿ.ಸಿ.ಕುಮಾರ್‌ ಆಗ್ರಹಿಸಿದರು.

ಪುರಾತತ್ವ ಅಧೀಕ್ಷಕ ಡಾ.ಶಿವಕಾಂತ ಬಾಜಪೇಯಿ, ಸಹಾಯಕ ಸ್ಮಾರಕ ಸಂರಕ್ಷಣಾಧಿಕಾರಿ ಕಿಶೋರ್ ರೆಡ್ಡಿ ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.