ADVERTISEMENT

ಹಾಸನ: ಶಿವನಾಮ ಸ್ಮರಣೆ, ಅಹೋರಾತ್ರಿ ಜಾಗರಣೆ

ದೇವಾಲಯಗಳಲ್ಲಿ ವಿಶೇಷ ಪೂಜೆ, ಶಿವ ಲಿಂಗಕ್ಕೆ ಕ್ಷೀರಾಭಿಷೇಕ, ಅನ್ನಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 15:45 IST
Last Updated 11 ಮಾರ್ಚ್ 2021, 15:45 IST
ಹಾಸನದ ಮಲ್ಲೇಶ್ವರ ದೇವಸ್ಥಾನದಲ್ಲಿ ಭಕ್ತರು ಶಿವನಿಗೆ ಕ್ಷೀರಾಭೀಷೇಕ ಮಾಡಿದರು.
ಹಾಸನದ ಮಲ್ಲೇಶ್ವರ ದೇವಸ್ಥಾನದಲ್ಲಿ ಭಕ್ತರು ಶಿವನಿಗೆ ಕ್ಷೀರಾಭೀಷೇಕ ಮಾಡಿದರು.   

ಹಾಸನ: ಮಹಾಶಿವರಾತ್ರಿ ಅಂಗವಾಗಿ ಜಿಲ್ಲೆಯ ವಿವಿಧೆಡೆ ಶಿವ ದೇವಾಲಯಗಳಲ್ಲಿ ಗುರುವಾರ ಶಿವನಾಮ ಸ್ಮರಣೆ ನಡೆಯಿತು. ಧ್ಯಾನ, ಕೀರ್ತನೆ, ಭಜನೆ, ಜಾಗರಣೆ, ವಿಶೇಷಪೂಜೆಗಳು ನಡೆದವು.

ಬೆಳಿಗ್ಗೆಯೇ ಸ್ನಾನ ಮಾಡಿದ ಭಕ್ತರು, ಸಮೀಪದ ಶಿವನ ದೇವಾಲಯಗಳಿಗೆ ತೆರಳಿಗೆ ಪೂಜೆ,ಭಕ್ತಿ ಸರ್ಮಪಿಸಿದರು. ಬಿಲ್ವಪತ್ರೆ ಅರ್ಚನೆ, ಕುಂಕುಮಾರ್ಚನೆ, ಭಜನೆ ನಡೆಸಿದರು.ನಗರದ ದೇವಸ್ಥಾನಗಳನ್ನು ಹೂವುಗಳಿಂದ ಅಲಂಕಾರ ಮಾಡಲಾಗಿದೆ.

ನಗರದ ಕಟ್ಟಿನಕೆರೆ ಮಾರುಕಟ್ಟೆಗೆ ಹೊಂದಿಕೊಂಡಿರುವ ಮಲ್ಲೇಶ್ವರ ದೇಸ್ಥಾನದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಮಲ್ಲೇಶ್ವರ ಸ್ವಾಮಿ, ಸತ್ಯ ನಾರಾಯಣ ಸ್ವಾಮಿ, ಪ್ರಸನ್ನಪಾರ್ವತಿ ಹಾಗೂ ನವಗ್ರಹ ದರ್ಶನ ಪಡೆದರು. ಶಿವ ಲಿಂಗಕ್ಕೆ ಕ್ಷೀರಾಭಿಷೇಕನೆರವೇರಿಸಲಾಯಿತು. ನಂತರ ಪ್ರಸಾದ ವಿತರಣೆ ನಡೆಯಿತು.

ADVERTISEMENT

ನಗರದ ಚಿಕ್ಕಗರಡಿ ರಸ್ತೆಯಲ್ಲಿರುವ ಪುರಾತನ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ವಿರೂಪಾಕ್ಷೇಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದ ಶುಕ್ರವಾರಬೆಳಿಗ್ಗೆ ವರೆಗೆ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನ 12.30 ರಿಂದಪ್ರಸಾದ ವಿತರಣೆ ನಡೆಯಲಿದೆ.

ಬಿ.ಎಂ. ರಸ್ತೆ, ನ್ಯೂ ಬಂಬೂ ಬಜಾರ್‌ನಲ್ಲಿರುವ ಅಮೃತೇಶ್ವರಸ್ವಾಮಿ ದೇವಾಲಯದಲ್ಲಿವಿಶೇಷ ಪೂಜೆ ನಡೆಯಿತು. ಶುಕ್ರವಾರ ಮಧ್ಯಾಹ್ನ 12ಕ್ಕೆ ಅಮೃತೇಶ್ವರ ಮೇಧ ಅಭಿವೃದ್ಧಿಸಂಸ್ಥೆ ವತಿಯಿಂದ ಅನ್ನದಾನ ಹಮ್ಮಿಕೊಳ್ಳಲಾಗಿದೆ.

ವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಎಚ್‌.ಎನ್‌. ನಾಗಭೂಷಣ್ಮಾತನಾಡಿ, ‘ದೇವಾಲಯದಲ್ಲಿ ಶುಕ್ರವಾರ ಬೆಳಿಗ್ಗೆ ವರೆಗೂ ವಿಶೇಷ ಪೂಜೆ, ಅರ್ಚನೆ ನಡೆಯಲಿವೆ. ಕೋವಿಡ್‌ ಬೇಗ ದೂರವಾಗಿ ಜನರಲ್ಲಿ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಲಾಗಿದೆ’ ಎಂದರು.

ಮಲ್ಲೇಶ್ವರಸ್ವಾಮಿ ದೇವಾಲಯದ ಅರ್ಚಕ ರಾಮಚಂದ್ರ ಹೆಗಡೆ ಮಾತನಾಡಿ, ‘ರೋಗಬಾಧೆಗಳು ಕಾಡಬಾರದು ಹಾಗೂ ಆರೋಗ್ಯ ಪ್ರಾಪ್ತವಾಗಬೇಕು ಎಂದು ಶಿವನಲ್ಲಿ ಪ್ರಾರ್ಥನೆ ಮಾಡಲಾಗಿದೆ. ದೇವರಿಗೆ ಬಿಲ್ವಾಭಿಷೇಕ. ಕ್ಷೀರಾಭಿಷೇಕ, ರುದ್ರಾಭಿಷೇಕ ಮಾಡಲಾಗಿದೆ’ ಎಂದು ತಿಳಿಸಿದರು.

ದೇವಸ್ಥಾನಗಳಲ್ಲಿ ನೂಕುನುಗ್ಗಲು ಏರ್ಪಟ್ಟು ಭಕ್ತರು ಪರಸ್ಪರ ಅಂತರ ಪಾಲನೆ ಮರೆತರು. ಕೆಲವರು ಮಾತ್ರ ಮಾಸ್ಕ್‌ ಧರಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.