ADVERTISEMENT

ಒಕ್ಕಲಿಗರ ಸಂಘ: ಸಮುದಾಯದ ಹಿತ ಕಾಪಾಡಿ- ಶಾಸಕ ಎಚ್‌.ಡಿ. ರೇವಣ್ಣ ಮನವಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 15:44 IST
Last Updated 25 ನವೆಂಬರ್ 2021, 15:44 IST
ಹಾಸನ ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್‌ ಆಯೋಜಿಸಿದ್ದ ಸಭೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು
ಹಾಸನ ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್‌ ಆಯೋಜಿಸಿದ್ದ ಸಭೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು   

ಹಾಸನ: ಮುಂದಿನ ತಿಂಗಳು ನಡೆಯಲಿರುವ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಶ್ರವಣಬೆಳಗೊಳದ ಶಾಸಕ ಸಿ.ಎನ್. ಬಾಲಕೃಷ್ಣ ಮತ್ತು ಸಾಮಾಜಿಕ ಕಾರ್ಯಕರ್ತರಘುಗೌಡ ಅವರನ್ನು ಬೆಂಬಲಿಸಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಮತದಾರರಿಗೆ ಮನವಿ ಮಾಡಿದರು.

ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದಿಂದ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಶಾಸಕರಾಗಿ ಬಾಲಕೃಷ್ಣ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ರಘುಗೌಡ ಕೂಡ ಯಾವುದೇ ಕಳಂಕ ಬಾರದಂತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಮತ ನೀಡಿದರೇ ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಪೂರಕವಾಗಲಿದೆ’ ಎಂದರು.

‘ಜನಸೇವೆಯೇ ಜನಾರ್ದನ ಸೇವೆ ಎಂಬಂತೆ ಇನ್ನೊಬ್ಬರ ಮೇಲೆ ಹಗೆತನ ಸಾಧಿಸುವುದಾಗಲಿ,ದ್ವೇಷ ಸಾಧಿಸುವುದು ಮಾಡದೇ ಸಮುದಾಯದ ಹಿತ ಕಾಪಾಡಬೇಕು. ಶಿಕ್ಷಣಕ್ಕೆ ಹೆಚ್ಚುಪ್ರಾಮುಖ್ಯತೆ ನೀಡಿ, ಸಮುದಾಯದ ಬಡ ಮಕ್ಕಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿಯಾಗಲು ಕಾರ್ಯ ನಿರ್ವಹಿಸಬೇಕು. ಸಮುದಾಯ ಹಿಂದಿನಿಂದಲೂ ಸಮಾಜಕ್ಕೆ ಮಾದರಿಯಾಗಿ ಕೆಲಸ ಮಾಡುತ್ತಿದ್ದು, ಅದನ್ನು ಇನ್ನಷ್ಟು ಮುಂದುವರೆಸಿಕೊಂಡುಹೋಗುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ‘ಒಕ್ಕಲಿಗರ ಸಮುದಾಯದ ಅಭಿವೃದ್ಧಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕೊಡುಗೆ ಅಪಾರ. ಒಕ್ಕಲಿಗ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಸತಿ ನಿಲಯ ಸ್ಥಾಪನೆ ಮಾಡಲಾಗಿದೆ. ಆದರೆ ಬೇರೆ ಯಾವ ಜಿಲ್ಲೆಯಲ್ಲಿ ಈ ರೀತಿಯ ವಿದ್ಯಾರ್ಥಿಗಳಿಗೆ ವಸತಿ ನಿಲಯ ಅಭಿವೃದ್ಧಿ ಆಗಿಲ್ಲ’ ಎಂದರು.

ಅಭ್ಯರ್ಥಿ ರಘುಗೌಡ ಮಾತನಾಡಿ, ‘ಒಕ್ಕಲಿಗ ಸಮುದಾಯಕ್ಕೆ ಉತ್ತಮ ಕೆಲಸ ಮಾಡುವನಿಟ್ಟಿನಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನನಗೆ ಆಶೀರ್ವದಿಸಬೇಕು’ ಎಂದರು.

ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಎಪಿಎಂಸಿ ಅಧ್ಯಕ್ಷ ಕಾಂತರಾಜ್, ಮಾಜಿ ಅಧ್ಯಕ್ಷ ಮಂಜೇಗೌಡ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ದ್ಯಾವೇಗೌಡ, ನಗರಸಭೆ ಸದಸ್ಯ ಚಂದ್ರೇಗೌಡ, ಎಚ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿದರಿಕೆರೆ ಜಯರಾಮ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.