ಹಾಸನದ ಕೃಷಿ ಇಲಾಖೆ ಕಚೇರಿ ಎದುರು ಸೋಮವಾರ ರೈತರು ಪ್ರತಿಭಟನೆ ನಡೆಸಿದರು
ಹಾಸನ: ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗ ತಗುಲಿದ್ದು, ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಸೋಮವಾರ ನಗರದ ಸಂತೆಪೇಟೆಯ ಕೃಷಿ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.
ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಮೂಲಕ ಸಂತೇಪೇಟೆ ವೃತ್ತಕ್ಕೆ ಬಂದ ಪ್ರತಿಭಟನಕಾರರು, ತೆರಳಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ಕಳಪೆ ಬೀಜ ಕಂಪನಿಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲೆಯಲ್ಲಿ ಹಲವು ದಶಕದಿಂದ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿದ್ದರಿಂದ ಜಿಲ್ಲೆಯ ರೈತರು ಮೆಕ್ಕೆಜೋಳ ಬಿತ್ತನೆಯತ್ತ ಒಲವು ತೋರಿದ್ದಾರೆ. ಇದೀಗ ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗ ಬಾಧಿಸಿದೆ. ಇದರಿಂದ ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಣಗಾಲ್ ಮೂರ್ತಿ, ಯುವ ಘಟಕ ಮುಖಂಡ ಗಂಗಾಧರ್, ಜಿಲ್ಲಾ ಘಟಕದ ಮುಖಂಡರಾದ ಪ್ರಕಾಶ್, ಮಂಜುನಾಥ್, ಪಾಲಾಕ್ಷ, ಶಿವಕುಮಾರ್, ಕೇಶವ್, ಕಾಂತರಾಜ್, ರಾಜಣ್ಣ, ಜಯಮ್ಮ, ರಾಧಮ್ಮ ಮತ್ತಿತರರು ಭಾಗವಹಿಸಿದ್ದರು.
‘ಮಾರ್ಗದರ್ಶನ ನೀಡದೇ ಉದಾಸೀನ’
ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದ ರೈತರು ನಷ್ಟ ಅನುಭವಿಸಲು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಕಂಪನಿಗಳು ಕಳಪೆ ಬಿತ್ತನೆ ಬೀಜ ನೀಡಿದ್ದಲ್ಲದೇ, ಜೋಳ ಬಿತ್ತನೆ ಮಾಡಿದ ಸ್ವಲ್ಪ ದಿನಗಳಲ್ಲೇ ರೋಗಕ್ಕೆ ತುತ್ತಾಗುತ್ತಿದೆ ಎಂಬ ಮಾಹಿತಿ ತಿಳಿದಿದ್ದರೂ, ರೈತರಿಗೆ ಸೂಕ್ತ ಮಾರ್ಗ ದರ್ಶನ ನೀಡದೆ ಉದಾಸೀನ ಮಾಡಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.