ADVERTISEMENT

ಮಾನಸಿಕ ಖಿನ್ನತೆಗೆ ಯೋಗ ಮದ್ದು

ಸರ್ಕಾರಿ ಕಲಾ, ವಾಣಿಜ್ಯ ಕಾಲೇಜು ಪ್ರಾಂಶುಪಾಲ ಸಿ. ರಾಜಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 15:34 IST
Last Updated 20 ಜೂನ್ 2019, 15:34 IST
ಹಾಸನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಯುವ ಸಮಾವೇಶವನ್ನು ಸರ್ಕಾರಿ ಕಲಾ, ವಾಣಿಜ್ಯ ಹಾಗೂ ಸ್ನಾತಕೋತ್ತರ ಸ್ವಾಯತ್ತ ಕಾಲೇಜು ಪ್ರಾಂಶುಪಾಲ ಸಿ. ರಾಜಪ್ಪ ಉದ್ಘಾಟಿಸಿದರು.
ಹಾಸನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಯುವ ಸಮಾವೇಶವನ್ನು ಸರ್ಕಾರಿ ಕಲಾ, ವಾಣಿಜ್ಯ ಹಾಗೂ ಸ್ನಾತಕೋತ್ತರ ಸ್ವಾಯತ್ತ ಕಾಲೇಜು ಪ್ರಾಂಶುಪಾಲ ಸಿ. ರಾಜಪ್ಪ ಉದ್ಘಾಟಿಸಿದರು.   

ಹಾಸನ: ಮಾನಸಿಕ ಖಿನ್ನತೆಗೆ ಯೋಗದಿಂದ ಪರಿಹಾರ ಸಿಗುವುದಲ್ಲದೇ ಮನಸ್ಸನ್ನು ಕೇಂದ್ರೀಕರಿಸಬಹುದು ಎಂದು ಸರ್ಕಾರಿ ಕಲಾ, ವಾಣಿಜ್ಯ ಹಾಗೂ ಸ್ನಾತಕೋತ್ತರ ಸ್ವಾಯತ್ತ ಕಾಲೇಜು ಪ್ರಾಂಶುಪಾಲ ಸಿ. ರಾಜಪ್ಪ ಅಭಿಪ್ರಾಯಪಟ್ಟರು.

ಜಿಲ್ಲಾ ಆಯುಷ್ ಇಲಾಖೆ, ನೆಹರು ಯುವ ಕೇಂದ್ರ, ರೆಡ್ ಕ್ರಾಸ್ ಘಟಕ, ಪತಂಜಲಿ ಯೋಗ ಪರಿವಾರ, ಸುಗ್ಗಿ ಹುಗ್ಗಿ ಸಾಂಸ್ಕೃತಿಕ ಯುವಕ ಸಂಘದ ಆಶ್ರಯದಲ್ಲಿ ಸರ್ಕಾರಿ ಕಲಾ, ವಾಣಿಜ್ಯ ಹಾಗೂ ಸ್ನಾತಕೋತ್ತರ ಸ್ವಾಯತ್ತ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಯೋಗ ಪ್ರಾತ್ಯಕ್ಷಿಕೆ ಹಾಗೂ ಜಿಲ್ಲಾ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಜೀವನ ಶೈಲಿ ಬದಲಾವಣೆಯಿಂದ ಉತ್ತಮ ಆರೋಗ್ಯ ಸಾಧ್ಯ. ಪ್ರತಿಯೊಬ್ಬರಿಗೂ ಯೋಗದ ಬಗ್ಗೆ ಅರಿವು ಮೂಡಿಸಬೇಕು. ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ADVERTISEMENT

ನಿವೃತ್ತ ಪ್ರಾಧ್ಯಾಪಕ ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಯೋಗದ ಮೂಲಕ ದೇಹದ ಎಲ್ಲಾ ಇಂದ್ರೀಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಮನಸ್ಸಿನ ಏಕಾಗ್ರತೆ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಆರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಯೋಗ, ಉತ್ತಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಧರ್ಮಕ್ಕೆ ಸೀಮಿತವಲ್ಲ. ಎಲ್ಲಾ ಧರ್ಮದವರು ಯೋಗದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕರೆ ನೀಡಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಎ.ಎಸ್.ಪುಷ್ಪ, ಸರ್ಕಾರಿ ಸ್ನಾತಕೋತ್ತರ ಕಾಲೇಜಿನ ಡೀನ್‍ ವೈ.ಪಿ.ಮಲ್ಲೇಗೌಡ, ಸಹ ಪ್ರಾಧ್ಯಾಪಕರಾದ ಡಾ.ವೀಣಾ ಎಚ್.ಎನ್, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಹರಿಹರಪುರ ಶ್ರೀಧರ್, ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪ, ಮಹಿಳಾ ಪತಂಜಲಿ ಯೋಗ ಸಮಿತಿ ಸಹ ಪ್ರಭಾರಿ ರುಕ್ಮಿಣಿ ದೇವರಾಜ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ ಯೋಜನೆಯಡಿ ಶುಚಿತ್ವಕ್ಕೆ ಶ್ರಮಿಸಿದ ಸಂಘ, ಸಂಸ್ಥೆಗಳ ಸದಸ್ಯರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.