ADVERTISEMENT

ಕಾಡಾನೆಗಳ ನಿರಂತರ ದಾಳಿ: ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಕಾಡಾನೆಗಳ ದಾಳಿಯಿಂದ ಜೀವ, ಬೆಳೆ, ಆಸ್ತಿಪಾಸ್ತಿಗೆ ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 14:11 IST
Last Updated 1 ಸೆಪ್ಟೆಂಬರ್ 2020, 14:11 IST
ಸಕಲೇಶಪುರದಲ್ಲಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಜನಪ್ರತಿನಿಧಿಗಳು, ಬೆಳೆಗಾರರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಗಿರೀಶ್‌, ಜಿ.ಪಂ. ಸಿಇಒ ಪರಮೇಶ್‌, ಉಪವಿಭಾಗಾಧಿಕಾರಿ ಎಂ. ಗಿರೀಶ್‌ ನಂದನ್‌  ಸಮಸ್ಯೆ ಆಲಿಸಿದರು
ಸಕಲೇಶಪುರದಲ್ಲಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಜನಪ್ರತಿನಿಧಿಗಳು, ಬೆಳೆಗಾರರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಗಿರೀಶ್‌, ಜಿ.ಪಂ. ಸಿಇಒ ಪರಮೇಶ್‌, ಉಪವಿಭಾಗಾಧಿಕಾರಿ ಎಂ. ಗಿರೀಶ್‌ ನಂದನ್‌  ಸಮಸ್ಯೆ ಆಲಿಸಿದರು   

ಸಕಲೇಶಪುರ: ಒಂದು ದಶಕದಿಂದ ಕಾಡಾನೆಗಳು ನಿತ್ಯ ತಾಲ್ಲೂಕಿನ ಒಂದಲ್ಲಾ ಒಂದು ಹಳ್ಳಿಗೆ ನುಗ್ಗಿ ಬೆಳೆ, ಆಸ್ತಿಪಾಸ್ತಿಗೆ ಹಾನಿ ಮಾಡುತ್ತಿವೆ. ಅಲ್ಲದೇ ಮಂಗಳವಾರ ಕೊಲ್ಲಹಳ್ಳಿಯಲ್ಲಿ ಅರ್ಚಕರನ್ನು ತುಳಿದು ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ವಿವಿಧ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಸಮೀಪದ ಕೊಲ್ಲಹಳ್ಳಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ನಸುಕಿನಲ್ಲಿ ಎದ್ದು ಪೂಜೆಗೆ ಅಣಿಯಾಗಲು ಮನೆಯಿಂದ ಹೊರ ಬಮದ ಅರ್ಚಕ ಆಸ್ತಿಕ್‌ ಭಟ್‌ ಅವರನ್ನು ಅಂಗಳದಲ್ಲಿ ಇದ್ದ ಕಾಡಾನೆ ಸೊಂಡಿಲಿನಿಂದ ಎಲೆದು ಹಾಕಿ, ತುಳಿದಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ, ಜನಪ್ರತಿನಿಧಿಗಳು, ಬೆಳೆಗಾರ ಸಂಘಟನೆಗಳು, ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ADVERTISEMENT

ಕಾಡಾನೆ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರಬೇಕು ಎಂದು ಒತ್ತಾಯಿಸಿ ಬಾಳೇಗದ್ದೆ ಬಡಾವಣೆ ಗುಹೆ ಕಲ್ಲಮ್ಮ ದೇವಸ್ಥಾನದಿಂದ ಉಪವಿಭಾಗಾಧಿಕಾರಿ ಕಚೇರಿಯವರೆಗೂ ಎರಡು ಕಿ.ಮೀ. ಕಾಲ್ನಡಿಗೆಯಲ್ಲಿ ಪ್ರತಿಭಟನಾ ಬೃಹತ್ ಮೆರವಣಿಗೆ ನಡೆಸಿದರು. ಹಳೆ ಬಸ್‌ ನಿಲ್ದಾಣ ಮುಂಭಾಗ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಹೊತ್ತು ಧರಣಿ ನಡೆಸಿದರು.

ಶಾಸಕ ಎಚ್.ಕೆ.ಕುಮಾರಸ್ವಾಮಿ, ಜಿ.ಪಂ. ಸದಸ್ಯೆ ಚಂಚಲ ಕುಮಾರಸ್ವಾಮಿ, ತಾ.ಪಂ ಉಪಾಧ್ಯಕ್ಷ ಕೃಷ್ಣೇಗೌಡ, ಸದಸ್ಯರಾದ ಯಡೇಹಳ್ಳಿ ಆರ್‌. ಮಂಜುನಾಥ್‌, ಎಚ್‌.ಎಚ್‌. ಉದಯ್‌, ಕರ್ನಾಟಕ ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್‌, ಪ್ರಧಾನ ಕಾರ್ಯದರ್ಶಿ ಮರಳೀಧರ್, ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘದ ಅಧ್ಯಕ್ಷ ತೋ.ಚಾ. ಅನಂತಸುಬ್ಬರಾಯ, ಸ.ಬ. ಭಾಸ್ಕರ್‌, ಬಾಳ್ಳು ರೋಹಿತ್‌, ಹುರುಡಿ ಅರುಣ್‌ಕುಮಾರ್‌ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಾಳ್ಳು ದಿನೇಶ್‌, ರಕ್ಷಣಾ ವೇದಿಕೆ ಸ್ವಾಭಿಮಾಜಿ ಸೇನೆ ಅಧ್ಯಕ್ಷ ಸಾಗರ್‌ ಜಾನೇಕೆರೆ, ಇದ್ರೀಸ್‌, ಸೇರಿದಂತೆ ವಿವಿಧ ಬೆಳೆಗಾರರ ಸಂಘಟನೆಗಳು, ರೈತರು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಯು.ಎಂ. ತೀರ್ಥಮಲ್ಲೇಶ್ ಹಾಗೂ ತೋ.ಚಾ ಅನಂತಸುಬ್ಬರಾಯ ಮಾತನಾಡಿ, ‘ಎಲ್ಲಾ ಕಾಡಾನೆಗಳಿಗೂ ಕೂಡಲೇ ರೇಡಿಯೊ ಕಾಲರ್‌ ಅಳವಡಿಸಬೇಕು. ಜಿಲ್ಲೆಯ ಸುಮಾರು 1.25 ಲಕ್ಷ ಎಕರೆ ರೈತರ ತೋಟ ಗದ್ದೆಗಳಲ್ಲಿಯೇ ಸುಮಾರು 60ಕ್ಕೂ ಹೆಚ್ಚು ಕಾಡಾನೆಗಳು ವಾಸ್ತವ್ಯ ಹೂಡಿವೆ. 30ಕ್ಕೂ ಹೆಚ್ಚು ಜನರ ಜೀವ ಹಾನಿ, ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ಆಸ್ತಿಪಾಸ್ತಿ ಹಾನಿ ಮಾಡಿವೆ. ಶಾಶ್ವತ ಪರಿಹಾರ ರೂಪಿಸುವಂತೆ, ಪ್ರತಿಭಟನೆ, ಮನವಿ, ಹಲವು ಸಭೆಗಳಲ್ಲಿ ಚರ್ಚೆ ಮೂಲಕ ಸಮಸ್ಯೆಯ ಗಂಭೀರತೆಯನ್ನು ಸರ್ಕಾರದ ಗಮನಕ್ಕೆ ತಂದರೂ ಸಮಸ್ಯೆ ಪರಿಹರಿಸದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ವ್ಯವಸ್ಥೆಯ ವೈಫಲ್ಯ’ ಎಂದು ಆರೋಪಿಸಿದರು.

ಶಾಸಕ ಎಚ್‌.ಕೆ. ಕುಮಾರಸ್ವಾಮಿ ಮಾತನಾಡಿ, ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಪುಂಡಾನೆಗಳನ್ನು ಕೂಡಲೇ ಹಿಡಿದು ಸ್ಥಳಾಂತರ ಮಾಡಬೇಕು, ಆನೆ ದಾಳಿಯಿಂದ ನಷ್ಟಕ್ಕೆ ಒಳಗಾದ ರೈತರಿಗೆ ಸರಿಯಾಗಿ ಪರಿಹಾರವನ್ನು ಸರ್ಕಾರ ನೀಡುತ್ತಿಲ್ಲ. ಇದರಿಂದಾಗಿ ಕಾಡಾನೆಗಳಿಂದ ಬೆಳೆ ನಷ್ಟಕ್ಕೆ ಒಳಗಾದ ಬಹುತೇಕ ರೈತರು ಇತ್ತೀಚೆಗೆ ಪರಿಹಾರಕ್ಕಾಗಿ ಅರ್ಜಿಗಳನ್ನು ಸಲ್ಲಿಸುವುದನ್ನೇ ಕೈಬಿಟ್ಟಿದ್ದಾರೆ. ರೈತರ ಬದುಕು ತೀರಾ ಸಂಕಷ್ಟದಲ್ಲಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಆಗಲೇ ಬೇಕು ಎಂದು ಆಗ್ರಹಿಸಿದರು.

ವಾರದೊಳಗೆ ಕ್ರಮ: ಡಿ.ಸಿ

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್.ಗಿರೀಶ್‌, ಜಿ.ಪಂ. ಸಿಇಒ ಪರಮೇಶ್‌, ಉಪವಿಭಾಗಾಧಿಕಾರಿ ಎಂ. ಗಿರೀಶ್‌ ನಂದನ್‌, ತಹಶೀಲ್ದಾರ್ ಮಂಜುನಾಥ್‌ ಭೇಟಿ ನೀಡಿ, ಸಮಸ್ಯೆ ಆಲಿಸಿದರು.

‘ಕಾಡಾನೆಗಳಿಂದ ಈ ಭಾಗದಲ್ಲಿ ಉಂಟಾಗುತ್ತಿರುವ ಸಮಸ್ಯೆ, ದಶಕದ ನಿಮ್ಮಗಳ ಹೋರಾಟಕ್ಕೆ ಈ ವರೆಗೂ ಪರಿಹಾರ ದೊರೆಯದೆ ಇರುವುದಕ್ಕೆ ನನಗೂ ತುಂಬಾ ನೋವಿದೆ’ ಒಂದು ವಾರದೊಳಗೆ ಜಿಲ್ಲಾ ಉಸ್ತುವಾರಿ ಸಚಿವರು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ಬೆಳೆಗಾರರ ಸಂಘಟನೆ ಒಳಗೊಂಡಂತೆ ತುರ್ತು ಸಭೆ ನಡೆಸಲಾಗುವುದು. ಕಾನೂನು ವ್ಯಾಪ್ತಿಯೊಳಗೆ ಒಂದು ಶಾಶ್ವತ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಗಿರೀಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.