ADVERTISEMENT

ಮೋದಿ ಅಧಿಕಾರವಧಿಯಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುದಾನ

ಕುಟುಂಬ ರಾಜಕಾರಣ ಬಿಜೆಪಿಯಲ್ಲಿ ಅಪ್ಪ, ಮಕ್ಕಳಿಗೆ ಸೀಮಿತ: ಪುಟ್ಟಸ್ವಾಮಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 17:04 IST
Last Updated 10 ಏಪ್ರಿಲ್ 2019, 17:04 IST
ಬಿ.ಜೆ.ಪುಟ್ಟಸ್ವಾಮಿ
ಬಿ.ಜೆ.ಪುಟ್ಟಸ್ವಾಮಿ   

ಹಾಸನ: ಕಾಂಗ್ರೆಸ್ ಅವಧಿಯಲ್ಲಿ ರಾಜ್ಯಕ್ಕೆ ₹ 74325 ಕೋಟಿ ಅನುದಾನ ನೀಡಿದ್ದರೆ, ಪ್ರಧಾನಿ ಮೋದಿ ಅವಧಿಯಲ್ಲಿ ₹ 3,18,954 ಕೋಟಿ ಅನುದಾನ ಬಂದಿದೆ ಎಂದು ಬಿಜೆಪಿ ನಾಯಕ ಬಿ.ಜೆ.ಪುಟ್ಟಸ್ವಾಮಿ ಹೇಳಿದರು.

ನಾಲ್ಕುವರೆ ಪಟ್ಟು ಹೆಚ್ಚಿನ ಅನುದಾನವನ್ನ ರಾಜ್ಯಕ್ಕೆ ನೀಡಲಾಗಿದೆ. ಬಿಸಿ ನೀರಲ್ಲಿ ನಿಂಬೆ ರಸ ಕುಡಿದುಕೊಂಡು ಮೋದಿ ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಹಾ ಘಟಬಂಧನ್ ನಲ್ಲಿ ಇರುವವರ ಅಜೆಂಡಾ ಅವರ ಕುಟುಂಬ. ಮೋದಿ ದೇಶವೇ ನನ್ನ ಕುಟುಂಬ ಎಂದರೆ, ಇವರು ಕುಟುಂಬವೇ ನಮ್ಮ ದೇಶ ಎನ್ನುತ್ತಾರೆ. ತಮ್ಮ ಸಂಸಾರದ ಬೆಳವಣಿಗೆಗೆ ಸ್ಥಳೀಯ ನಾಯಕರು ಒಂದಾಗಿದ್ದಾರೆ ಎಂದು ಆರೋಪಿಸಿದರು.

ADVERTISEMENT

ರಾಜ್ಯದ ಮೈತ್ರಿ ಅತಂತ್ರ ಸ್ಥಿತಿಯಲ್ಲಿದೆ. ಹಾಸನ, ಮಂಡ್ಯ, ತುಮಕೂರಿನಲ್ಲಿ ಕುಟುಂಬ ವಿಸ್ತರಣೆಗೆ ಹೊರಟಿದ್ದಾರೆ. ದೇವೇಗೌಡರ ಕುಟುಂಬದ ಮೂವರು ಅಭ್ಯರ್ಥಿಗಳೂ ಸೋಲುತ್ತಾರೆ. ಇವರು ರಾಜಕೀಯವಾಗಿ ಮಾತ್ರ ವಿಸ್ತರಣೆ ಆಗಲ್ಲ. ಸರ್ಕಾರಿ ಗೋಮಾಳ ಸೇರಿ ಸರ್ಕಾರಿ ಭೂಮಿ ಯಾರಿಗೂ ಸಿಗದಂತೆ ಮಾಡುತ್ತಾರೆ ಎಂದರು.

ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಇರುವುದು ನಿಜ. ಆದರೆ, ಬಿಜೆಪಿಯಲ್ಲಿ ಇದು ಕೇವಲ ಅಪ್ಪ, ಮಕ್ಕಳಿಗೆ ಸೀಮಿತವಾಗಿದೆ. ಯಡಿಯೂರಪ್ಪ ತಮ್ಮ ಮತ್ತೊಬ್ಬ ಮಗನಿಗೆ ವಿಧಾನಸಭೆ ಟಿಕೆಟ್‌ ಕೊಡಿಸಲು ಎಷ್ಟು ಪ್ರಯತ್ನ ಮಾಡಿದರು. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿಜಯೇಂದ್ರಗೆ ಟಿಕೆಟ್ ನೀಡಲಿಲ್ಲ. ಜೆಡಿಎಸ್ ನಲ್ಲಿ ಅಪ್ಪ ಮಕ್ಕಳು, ಮೊಮ್ಮಕ್ಕಳು ಸೊಸೆಯರು ಕೂಡ ರಾಜಕೀಯದಲ್ಲಿದ್ದಾರೆ ಎಂದು ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.