ADVERTISEMENT

ಮುಂಗಾರು ಚುರುಕು: ಚೇತರಿಕೆ ಕಂಡ ಬೆಳೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 12:32 IST
Last Updated 6 ಜುಲೈ 2023, 12:32 IST
ಅರಕಲಗೂಡು ತಾಲ್ಲೂಕು ವಿಜಾಪುರ ಅರಣ್ಯ ಗ್ರಾಮದಲ್ಲಿ ಮಳೆಯಿಂದ ಚೇತರಿಕೆ ಕಾಣುತ್ತಿರುವ ಜೋಳದ ಬೆಳೆ
ಅರಕಲಗೂಡು ತಾಲ್ಲೂಕು ವಿಜಾಪುರ ಅರಣ್ಯ ಗ್ರಾಮದಲ್ಲಿ ಮಳೆಯಿಂದ ಚೇತರಿಕೆ ಕಾಣುತ್ತಿರುವ ಜೋಳದ ಬೆಳೆ   

ಅರಕಲಗೂಡು: ತಾಲ್ಲೂಕಿನಲ್ಲಿ ಗುರುವಾರ ಮುಂಗಾರು ಚುರುಕಾಗಿದೆ. 

ಮಳೆಯಿಂದಾಗಿ ಪಟ್ಟಣದಲ್ಲಿ ಬೀದಿ ವ್ಯಾಪಾರಿಗಳು ಕಿರಿ ಕಿರಿ ಅನುಭವಿಸಿದರು. ದಿನವಹಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಮಳೆಯಲ್ಲೇ ಸರಕು ಮಾರಾಟ ಮಾಡಿದರು.  ವ್ಯಾಪಕ ಮಳೆಗೆ ಒಣಗುತ್ತಿದ್ದ ಬೆಳೆಗಳಿಗೆ ಜೀವ ಕಳೆ ಬಂದಂತಾಗಿದೆ. ಕೆಲ ದಿನಗಳಿಂದ ಮೋಡ ಕವಿದು ಬೀಳುತ್ತಿದ್ದ ತುಂತುರು ಮಳೆ ರೈತರಲ್ಲಿ ನಿರಾಸೆ ಮೂಡಿಸಿತ್ತು. ಇಂದು ಬೆಳಗ್ಗೆಯಿಂದಲೇ ಸೋನೆ ಮಳೆ ಬೀಳುತ್ತಿದ್ದು ಬಿಸಿಲಿಗೆ ಬಾಡಿದ್ದ ಬೆಳೆಗಳು ಚೇತರಿಕೆ ಕಾಣಲಾರಂಭಿಸಿವೆ.

ಪ್ರಮುಖ ವಾಣಿಜ್ಯ ಬೆಳೆಗಳಾದ ತಂಬಾಕು, ಆಲೂಗಡ್ಡೆ, ಶುಂಠಿ, ಮುಸುಕಿನ ಜೋಳದ ಬೆಳೆಗಳು ಮಳೆಯಿಲ್ಲದೆ ಬಹುತೇಕ ಒಣಗಲಾರಂಭಿಸಿದ್ದವು. ರೈತರಿಗೆ ತಂಬಾಕು ಇಳುವರಿ ಕುಂಠಿತಗೊಂಡು ನಷ್ಟಕ್ಕೊಳಗಾಗುವ ಆತಂಕ ಕಾಡಿತ್ತು. ಇದೀಗ ಎಡಬಿಡದೆ ಬಿದ್ದ ಮಳೆಗೆ ಬೆಳೆಗಳು ಚೇತರಿಸಿಕೊಳ್ಳುವ ಆಶಾಭಾವನೆ ರೈತರಲ್ಲಿ ಮೂಡಿದೆ.

ADVERTISEMENT

ಮುಂಗಾರು ತಡವಾದ ಕಾರಣ ಬೆಳೆ ಬೆಳವಣಿಗೆಗೆ ಹೊಡೆತ ಬಿದ್ದಿತ್ತು. ಈಗ ಮಳೆಯಾದ ಕಾರಣ ಅಲ್ಪಸ್ವಲ್ಪ ಫಸಲು ಕೈಸೇರಲಿದೆ ಎನ್ನುತ್ತಾರೆ ರೈತರು.

ಕೃಷಿ ಚಟುವಟಿಕೆ ಚುರುಕು: ವರ್ಷಧಾರೆಗೆ ಹರ್ಷಗೊಂಡ ರೈತರು ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ಮುಸುಕಿನ ಜೋಳ, ಆಲೂಗಡ್ಡೆ ಮತ್ತಿತರ ದ್ವಿದಳ‌ ಧಾನ್ಯ ಬೆಳೆಗಳ ಬಿತ್ತನೆ ಕಾರ್ಯ ನಡೆಸಲು ಮಳೆ ಅನುಕೂಲಕರವಾಗಿದೆ. ಕೊಡಗಿನಲ್ಲಿ ಮಳೆಯಿಂದಾಗಿ ಹಾರಂಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು ಡ್ಯಾಂನಲ್ಲಿ ನೀರು ಹೊರ ಬಿಟ್ಟಿರುವುದರಿಂದ ಕಾವೇರಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.