ADVERTISEMENT

ಮೋಸ ಹೋಗದಂತೆ ಎಚ್ಚರ ವಹಿಸಿ

ಗ್ರಾಹಕರಿಗೆ ಜಿ.ಪಂ. ಉಪ ಕಾರ್ಯದರ್ಶಿ ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 13:12 IST
Last Updated 24 ಡಿಸೆಂಬರ್ 2018, 13:12 IST
ಹಾಸನದಲ್ಲಿ ಏರ್ಪಡಿಸಿದ್ದ ಗ್ರಾಹಕರ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನಾಗರಾಜ್‌ ಮಾತನಾಡಿದರು.
ಹಾಸನದಲ್ಲಿ ಏರ್ಪಡಿಸಿದ್ದ ಗ್ರಾಹಕರ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನಾಗರಾಜ್‌ ಮಾತನಾಡಿದರು.   

ಹಾಸನ: ಯಾವುದೇ ಒಂದು ಪದಾರ್ಥ ಖರೀದಿ ಮಾಡುವ ಮುನ್ನ ಗ್ರಾಹಕರು ವಸ್ತುವಿನ ತೂಕ, ಅಳತೆ, ಗರಿಷ್ಠ ದರಗಳ ಬಗ್ಗೆ ಮೋಸ ಹೋಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನಾಗರಾಜ್ ಹೇಳಿದರು.

ನಗರದ ಗಂಧದ ಕೋಠಿಯ ಸರ್ಕಾರಿ ಪದವಿ ಪೂರ್ವ (ವಿಭಜಿತ) ಕಾಲೇಜಿನಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಗ್ರಾಹಕ ವಸ್ತುಗಳನ್ನು ಖರೀದಿಸುವಾಗ ಬಳಸಲು ಯೋಗ್ಯವಾಗಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು.ಹಣ ನೀಡಿ ವಸ್ತು ಕೊಂಡುಕೊಳ್ಳುವಾಗ ಗ್ರಾಹಕರಿಗೆ ಅನ್ಯಾಯವಾಗಬಾರದು. ಒಂದು ವೇಳೆ ಅನ್ಯಾಯ ಆಗಿರುವುದು ತಿಳಿದರೆ ಕೂಡಲೇ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿ ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ADVERTISEMENT

ಇಲಾಖೆ ಉಪ ನಿರ್ದೇಶಕಿ ಪಿ.ಸವಿತಾ ಮಾತನಾಡಿ, ಗ್ರಾಹಕರ ಹಕ್ಕು ಸಂರಕ್ಷಣೆಯ ಕಾಯಿದೆ 1985ರಲ್ಲಿಯೇ ಜಾರಿಗೆ ಬಂದಿದೆ. ಗ್ರಾಹಕರು ಕೊಳ್ಳುವ ಸರಕು ಇಲ್ಲವೇ ಸೇವೆಯಲ್ಲಿ ಏನಾದರೂ ಲೋಪ ಕಂಡು ಬಂದರೇ ಗ್ರಾಹಕ ಇಲಾಖೆಗೆ ದೂರು ಕೊಡಬಹುದು. ಯಾವುದೇ ಸರಕನ್ನು ಗ್ರಾಹಕ ಇಷ್ಟಪಟ್ಟಂತೆ ನೀಡಬೇಕು. ಹಿಂಸೆಯಿಂದ ಕೊಡುವಂತಿಲ್ಲ ಎಂದರು.

ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಕಾರ್ಯಾಧ್ಯಕ್ಷ ವೈ.ಎಸ್. ಸಿದ್ದಯ್ಯ ಮಾತನಾಡಿ, ‘ಒಂದು ವಸ್ತು ಕೊಂಡುಕೊಳ್ಳುವಾಗ ಅದರಿಂದ ಮೋಸವಾದರೆ ಸ್ಥಳದಲ್ಲಿಯೇ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಇಲ್ಲವಾದರೆ ಅಂಗಡಿ ಮಾಲೀಕನು ನಿರಂತರವಾಗಿ ಇಂತಹ ಮೋಸದ ಕೆಲಸ ಮಾಡುತ್ತಾನೆ’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಬಿ.ಆರ್. ಇಂದುಮತಿ ಬಾಯಿ, ಅನಿಲ್ ಕುಮಾರ್, ಪ್ರಾಂಶುಪಾಲ ಕೆ.ಪಿ. ಸುರೇಶ್, ಬೋರೇಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.