ADVERTISEMENT

ಹಾಸನ | ಎಂಎಸ್‌ಎಂಇ ಸಮಾವೇಶ ಮೇ 30 ರಿಂದ

ಸಣ್ಣ ಕೈಗಾರಿಕೆಗಳ ಸಂಘಕ್ಕೆ ಎಫ್‌ಕೆಸಿಸಿಐ, ಕಾಸ್ಸಿಯಾ ನಿಯೋಗ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಮೇ 2025, 14:27 IST
Last Updated 11 ಮೇ 2025, 14:27 IST
ಹಾಸನದ ಸಣ್ಣ ಕೈಗಾರಿಕೆಗಳ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಎಸ್‌ಎಂಇ ಸಮಾವೇಶದ ಕರಪತ್ರ ಬಿಡುಗಡೆ ಮಾಡಲಾಯಿತು.
ಹಾಸನದ ಸಣ್ಣ ಕೈಗಾರಿಕೆಗಳ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಎಸ್‌ಎಂಇ ಸಮಾವೇಶದ ಕರಪತ್ರ ಬಿಡುಗಡೆ ಮಾಡಲಾಯಿತು.   

ಹಾಸನ: ಎಫ್‌ಕೆಸಿಸಿಐ, ಕಾಸ್ಸಿಯಾ ಹಾಗೂ ಪಿಣ್ಯ ಇಂಡಸ್ಟ್ರೀಯಲ್‌ ಅಸೋಸಿಯೇಶನ್‌ ವತಿಯಿಂದ ಎಂಎಸ್‌ಎಂಇ ಸಮಾವೇಶವನ್ನು ಮೇ 30 ರಿಂದ ಜೂನ್‌ 1 ರವರೆಗೆ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಫ್‌ಕೆಸಿಸಿಐ ಐಟಿ–ಬಿಟಿ ಉಪ ಸಮಿತಿ ಅಧ್ಯಕ್ಷ ಎಚ್‌.ಕೆ. ಕಿರಣ್‌ ಹೇಳಿದರು.

ನಗರದ ಸಣ್ಣ ಕೈಗಾರಿಕೆಗಳ ಸಂಘದಲ್ಲಿ ಪದಾಧಿಕಾರಿಗಳ ಜೊತೆಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಲಘು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅನುಕೂಲ ಆಗುವಂತೆ ಸಮಾವೇಶ ಆಯೋಜಿಸಲಾಗಿದೆ. ಇದರಿಂದ 250 ಕ್ಕೂ ಅಧಿಕ ಮಳಿಗೆಗಳು ಇರಲಿವೆ. ಎಸ್ಸಿ, ಎಸ್ಟಿ ಮತ್ತು ಮಹಿಳಾ ಉದ್ಯಮಿಗಳಿಗೆ ಶೇ 100 ರಷ್ಟು ಹಾಗೂ ಸಾಮಾನ್ಯ ಉದ್ಯಮಿಗಳಿಗೆ ಶೇ 80 ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದರು.

ಉದ್ಯಮಿಗಳಿಗೆ ಇದೊಂದು ಅಪೂರ್ವ ಅವಕಾಶವಾಗಿದ್ದು, ವಸ್ತು ಪ್ರದರ್ಶನ ಹಾಗೂ ತಾಂತ್ರಿಕ ಗೋಷ್ಠಿಗಳಲ್ಲಿ ಭಾಗವಹಿಸುವ ಮೂಲಕ ಪ್ರಯೋಜನ ಪಡೆಯಬೇಕು. ಈ ಸಮಾವೇಶದಲ್ಲಿ ಎಂಜಿನಿಯರಿಂಗ್‌ ಹಾಗೂ ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ADVERTISEMENT

ಎಫ್‌ಕೆಸಿಸಿಐನ ಕೈಗಾರಿಕಾ ಸಮಿತಿ ಅಧ್ಯಕ್ಷ ಸತೀಶ್‌ ಚಳ್ಳಕೆರೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಮೇ 30 ರಿಂದ ಜೂನ್‌ 1 ರವರೆಗೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಉದ್ಯಮಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಉಮೇಶ್‌ ಮಾತನಾಡಿ, ಕಾರ್ಯಕ್ರಮದಲ್ಲಿ ಅಗತ್ಯವಿರುವ ಎಲ್ಲ ಸಹಕಾರ ನೀಡಲಾಗುವುದು ಎಂದರು.

ಕಾಸ್ಸಿಯಾ ನಿರ್ದೇಶಕ ರಂಗಸ್ವಾಮಿ ಮಾತನಾಡಿ, ಸಮಾವೇಶದ ಮಹತ್ವದ ಕುರಿತು ವಿವರಿಸಿದರು.

ಎಫ್‌ಕೆಸಿಸಿಐ ನಿರ್ದೇಶಕ ಕೆ.ಎಂ. ಶಿವಮೂರ್ತಿ, ಹಾಸನ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುದರ್ಶನ್‌, ಗೌರವಾಧ್ಯಕ್ಷ ಎಚ್‌.ಆರ್‌. ಮದನಕುಮಾರ್‌, ಸಂಘದ ಸದಸ್ಯರು ಹಾಜರಿದ್ದರು. ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪ್ರಕಾಶ್‌ ಎಸ್‌. ಯಾಜಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.