ಹಾಸನ: ನಗರಸಭೆ ಅಧ್ಯಕ್ಷರಾಗಿರುವ ತನ್ನದೇ ಪಕ್ಷದ ಎಂ. ಚಂದ್ರೇಗೌಡರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ಜೆಡಿಎಸ್ ಮುಖಭಂಗ ಅನುಭವಿಸುವಂತಾಗಿದೆ. ಬಿಜೆಪಿ–ಕಾಂಗ್ರೆಸ್ ಸದಸ್ಯರ ಬೆಂಬಲದಿಂದಾಗಿ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದ್ದು, ಚಂದ್ರೇಗೌಡ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಸೋಮವಾರ ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಹಾಲಿ ಅಧ್ಯಕ್ಷ ಎಂ. ಚಂದ್ರೇಗೌಡರ ವಿರುದ್ಧ ಜೆಡಿಎಸ್ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದರು. ಆದರೆ, ಅವಿಶ್ವಾಸ ನಿರ್ಣಯದ ಪರವಾಗಿ ಬೇಕಿದ್ದ 26 ಮತಗಳ ಪೈಕಿ, 21 ಮತಗಳು ಸಿಕ್ಕಿದ್ದು, ಜೆಡಿಎಸ್ ಹಿನ್ನಡೆ ಅನುಭವಿಸುವಂತಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು, ಅವಿಶ್ವಾಸ ನಿರ್ಣಯದ ವಿರುದ್ಧ ಮತ ಚಲಾಯಿಸಿದರು.
ನಗರಸಭೆಯಲ್ಲಿ ಜೆಡಿಎಸ್‌ನ 17, ಬಿಜೆಪಿಯ 14, ಕಾಂಗ್ರೆಸ್ ಹಾಗೂ ಪಕ್ಷೇತರ ತಲಾ ಇಬ್ಬರು ಸದಸ್ಯರಿದ್ದಾರೆ. ಇದರ ಜೊತೆಗೆ ಸಂಸದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಸಭೆಯಲ್ಲಿ ಹಾಜರಿದ್ದು, ಒಟ್ಟು 38 ಮತಗಳಿದ್ದವು. ಎಂ.ಚಂದ್ರೇಗೌಡ ತಟಸ್ಥವಾಗಿ ಉಳಿದಿದ್ದರಿಂದ 37 ಮತಗಳು ಚಲಾವಣೆ ಆಗಬೇಕಿತ್ತು. ಅವುಗಳ ಪೈಕಿ ಅವಿಶ್ವಾಸ ನಿರ್ಣಯದ ಪರವಾಗಿ 26 ಮತಗಳು ಅಗತ್ಯವಾಗಿದ್ದವು.
ಜೆಡಿಎಸ್‌ನ ಎಲ್ಲ 16 ಸದಸ್ಯರು, ಶಾಸಕ ಸ್ವರೂಪ್ ಪ್ರಕಾಶ್, ಡಾ.ಸೂರಜ್ ರೇವಣ್ಣ ಹಾಗೂ ಕಾಂಗ್ರೆಸ್‌ನ ಒಬ್ಬ ಸದಸ್ಯರು, ಇಬ್ಬರು ಪಕ್ಷೇತರ ಸದಸ್ಯರು ಸೇರಿದಂತೆ 21 ಜನರು ಅವಿಶ್ವಾಸ ನಿರ್ಣಯದ ಪರ ಮತ ಚಲಾಯಿಸಿದರು. ಆದರೆ, ಬಿಜೆಪಿಯ 14, ಕಾಂಗ್ರೆಸ್‌ನ ಒಬ್ಬರು ಮತ್ತು ಸಂಸದ ಶ್ರೇಯಸ್ ಪಟೇಲ್ ಸೇರಿ 16 ಜನರು ಅವಿಶ್ವಾಸ ನಿರ್ಣಯದ ವಿರುದ್ಧ ಮತ ಹಾಕಿದರು.
ಸಭೆಗೆ ತಡವಾಗಿ ಬಂದ ಜೆಡಿಎಸ್ ಸದಸ್ಯರು:
ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸೋಮವಾರ ಮಧ್ಯಾಹ್ನ 12.30ಕ್ಕೆ ಸಭೆ ನಿಗದಿ ಮಾಡಲಾಗಿತ್ತು. ಬಿಜೆಪಿ ಸದಸ್ಯರೊಂದಿಗೆ ಬಂದ ಅಧ್ಯಕ್ಷ ಎಂ. ಚಂದ್ರೇಗೌಡ, ಸಮಯಕ್ಕೆ ಸರಿಯಾಗಿ ಹಾಜರಾಗಿದ್ದರು. ನಂತರ ಸಂಸದ ಶ್ರೇಯಸ್ ಪಟೇಲ್, ಕಾಂಗ್ರೆಸ್ ಸದಸ್ಯರು ಹಾಗೂ ನಾಮ ನಿರ್ದೇಶಿತ ಕೆಲ ಸದಸ್ಯರೊಂದಿಗೆ ಸಭೆಗೆ ಹಾಜರಾದರು.
ಆದರೆ, ಜೆಡಿಎಸ್‌ನ ಯಾವೊಬ್ಬ ಸದಸ್ಯರು ಸಭೆಯಲ್ಲಿ ಕಾಣಿಸಲಿಲ್ಲ. ನಂತರ ಬಿಜೆಪಿಯ ಸದಸ್ಯ ಸಂತೋಷ್ ಹಾಗೂ ಇತರೆ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸುವಂತೆ ಪ್ರಭಾರ ಆಯುಕ್ತ ರಮೇಶ್ ಹಾಗೂ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಉಪಾಧ್ಯಕ್ಷೆ ಹೇಮಲತಾ ಅವರನ್ನು ಒತ್ತಾಯಿಸಿದರು. ಆದರೆ ಆಯುಕ್ತರು ಅರ್ಧ ಗಂಟೆ ಕಾಲಾವಕಾಶ ನೀಡುವುದಾಗಿ ಹೇಳಿದರು.
12.40ಕ್ಕೆ ಜೆಡಿಎಸ್ ಸದಸ್ಯರು, ಶಾಸಕ ಸ್ವರೂಪ್ ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಸಭೆಗೆ ಹಾಜರಾದರು. ಅವಿಶ್ವಾಸ ನಿರ್ಣಯದ ಪರ ಹಾಗೂ ವಿರುದ್ಧ ಮತ ಚಲಾಯಿಸುವಂತೆ ಆಯುಕ್ತರು ಸೂಚಿಸಿದರು.
ಪಕ್ಷಾತೀತವಾಗಿ ಚಂದ್ರೇಗೌಡರನ್ನು ಬೆಂಬಲಿಸಿದ್ದೇವೆಯೇ ಹೊರತು ಹೊಂದಾಣಿಕೆ ರಾಜಕೀಯ ಇಲ್ಲ. ಚಂದ್ರೇಗೌಡರು ಉತ್ತಮ ಕೆಲಸ ಮಾಡಿದ್ದಾರೆ. ಅಭಿವೃದ್ಧಿಗೆ ಮೆಚ್ಚಿ ಬಿಜೆಪಿ ಕಾಂಗ್ರೆಸ್ ಸದಸ್ಯರೆಲ್ಲ ಬೆಂಬಲ ನೀಡಿದ್ದಾರೆ.ಶ್ರೇಯಸ್ ಪಟೇಲ್ ಸಂಸದ
ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ವಿರೋಧ ಪಕ್ಷ. ಸಂಸದರು ಕಾಂಗ್ರೆಸ್ ಸದಸ್ಯರು ನಿರ್ಣಯದ ವಿರುದ್ಧ ಮತ ಚಲಾಯಿಸಿದ್ದಾರೆ. ಇದು ಜೆಡಿಎಸ್ ವಿರುದ್ಧವೇ ಹೊರತು ಬಿಜೆಪಿ ಪರ ಅಲ್ಲ. ತಟಸ್ಥ ಉಳಿದಿದ್ದರೆ ಕಾಂಗ್ರೆಸ್ ಗೌರವ ಹೆಚ್ಚಾಗುತ್ತಿತ್ತು ಎಂಬುದು ನನ್ನ ಅಭಿಪ್ರಾಯ.ದೇವರಾಜೇಗೌಡ ಕಾಂಗ್ರೆಸ್ ಜಿಲ್ಲಾ ವಕ್ತಾರ
ಫಲಿಸಿದ ಪ್ರೀತಂ–ಶ್ರೇಯಸ್ ತಂತ್ರ
ಎಚ್.ಡಿ. ರೇವಣ್ಣ ಅವರನ್ನು ರಾಜಕೀಯವಾಗಿ ವಿರೋಧಿಸಿಕೊಂಡೇ ಬಂದಿರುವ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹಾಗೂ ಸಂಸದ ಶ್ರೇಯಸ್ ಪಟೇಲ್ ಇದೀಗ ಜೆಡಿಎಸ್‌ಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ನಡೆದ ಉಪಾಧ್ಯಕ್ಷರ ಚುನಾವಣೆಯ ವೇಳೆ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಮೈತ್ರಿ ಧರ್ಮ ಪಾಲಿಸಿದ್ದ ಬಿಜೆಪಿ ಅವಿಶ್ವಾಸ ನಿರ್ಣಯದ ವೇಳೆ ತಿರುಗಿ ಬಿದ್ದಿದೆ. ಪ್ರೀತಂಗೌಡ–ಶ್ರೇಯಸ್ ಪಟೇಲ್ ಒಂದಾಗಿರುವ ಬಗ್ಗೆ ಸುಳಿವು ಪಡೆದಿದ್ದ ಎಚ್.ಡಿ. ರೇವಣ್ಣ ಸಭೆಗೂ ಮುನ್ನ ನಗರದ ಖಾಸಗಿ ಹೋಟೆಲ್‌ನಲ್ಲಿ ನಗರಸಭೆ ಜೆಡಿಎಸ್ ಸದಸ್ಯರು ಶಾಸಕ ಸ್ವರೂಪ್ ಅವರೊಂದಿಗೆ ಸಭೆ ನಡೆಸಿದ್ದರು. ಅವಿಶ್ವಾಸ ನಿರ್ಣಯದ ಪರವಾಗಿ ಬೇಕಿದ್ದ ಮತಗಳನ್ನು ಕ್ರೋಡೀಕರಿಸುವ ಕುರಿತು ಸಭೆಯಲ್ಲಿ ಚರ್ಚೆಗಳು ನಡೆದಿದ್ದವು. ಶಾಸಕ ಸ್ವರೂಪ್ ಹಾಗೂ ಡಾ.ಸೂರಜ್ ರೇವಣ್ಣ ಅವರು ಸಭೆಯಲ್ಲಿಯೇ ಬಿಜೆಪಿಯ ಕೆಲ ಸದಸ್ಯರ ಜೊತೆ ಮಾತನಾಡಿದ್ದು ಇದಕ್ಕೆ ಪುಷ್ಠಿ ನೀಡುವಂತಿತ್ತು. ಇದಕ್ಕೆ ಬಿಜೆಪಿ ಸದಸ್ಯರಿಂದ ಆಕ್ಷೇಪವೂ ವ್ಯಕ್ತವಾಯಿತು.
‘ಪ್ರೀತಂ ಶ್ರೇಯಸ್ ಹೇಳಿದ ದಾರಿಯಲ್ಲಿ ನಡೆಯುವೆ’
‘ಅವಿಶ್ವಾಸ ನಿರ್ಣಯ ಜಿಲ್ಲೆಯ ಜನತೆಯ ಸ್ವಾಭಿಮಾನದ ಪ್ರಶ್ನೆಯಾಗಿತ್ತು. ಇದು ಜನರ ಆತ್ಮಗೌರವದ ಗೆಲುವು. ಪ್ರೀತಂ ಗೌಡ ಶ್ರೇಯಸ್ ಬೆಂಬಲ ನೀಡಿದ್ದು ಅವರು ಹೇಳಿದ ದಾರಿಯಲ್ಲಿ ನಡೆಯುವೆ’ ಎಂದು ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಹೇಳಿದರು. ‘ನಗರ ಅಭಿವೃದ್ಧಿ ಶ್ರಮಿಸುವೆ. ಹಾಸನಾಂಬೆ ದೇವಿ ಆಶೀರ್ವಾದ ಇದೆ. ನಗರಸಭೆ ಸದಸ್ಯರಿಗೆ ಧನ್ಯವಾದಗಳು ಬಿಜೆಪಿ ಸದಸ್ಯರಿಗೆ ಅಭಾರಿಯಾಗಿದ್ದೇನೆ. ನಾನು ಅನ್ಯಾಯ ಮಾಡಿದ್ದೇನಾ? ಅವ್ಯವಹಾರ ಮಾಡಿದ್ದೇನಾ? 3–4 ತಿಂಗಳ ಸಹಕಾರ ಕೇಳಿದೆ ಆದರೆ ಕೊಡಲಿಲ್ಲ. ನಮ್ಮವರೂ ಕೆಲವರು ನನ್ನ ಪರವಿದ್ದು ಪ್ರೀತಂಗೌಡ ಬೆಂಬಲ ನೀಡಿದರು. ಉತ್ತಮ ಕೆಲಸ ಮಾಡುವೆ’ ಎಂದು ಹೇಳಿದರು.
ಅಪವಿತ್ರ ಮೈತ್ರಿಯಿಂದ ಸೋಲು: ಸೂರಜ್ ನಗರಸಭೆ ಅಧ್ಯಕ್ಷರ ಅವಧಿಯನ್ನು ಜೆಡಿಎಸ್‌ನ ಎಲ್ಲ ಸದಸ್ಯರಿಗೂ ಹಂಚಿಕೆ ಮಾಡುವ ನಿಟ್ಟಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತೇ ಹೊರತು ಚಂದ್ರೇಗೌಡರ ವಿರುದ್ಧ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಸ್ಪಷ್ಟಪಡಿಸಿದರು. ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್‌ನ ಎಲ್ಲ ಸದಸ್ಯರು ಅವಿಶ್ವಾಸ ನಿರ್ಣಯದ ಪರವಾಗಿ ಇದ್ದರು. ಆದರೆ ಬಿಜೆಪಿ– ಕಾಂಗ್ರೆಸ್ ಅಪವಿತ್ರ ಮೈತ್ರಿ ಮಾಡಿಕೊಳ್ಳುವ ಮೂಲಕ ಅನಿರೀಕ್ಷಿತ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದು ಹೇಳಿದರು. ರಾಜ್ಯ ಕೇಂದ್ರದಲ್ಲಿ ಬಿಜೆಪಿ– ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಜಿಲ್ಲೆಯಲ್ಲಿ ಮಾತ್ರ ಕಾಂಗ್ರೆಸ್– ಬಿಜೆಪಿ ಮೈತ್ರಿ ಮಾಡಿಕೊಂಡಂತೆ ವರ್ತಿಸುತ್ತಿರುವುದು ದಿಗ್ಬ್ರಮೆ ಮೂಡಿಸಿದೆ. ಸಂಸದರ ಚುನಾವಣೆಯಲ್ಲಿಯೂ ಇದೆ ರೀತಿ ಆಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಒಂದಾಗಿದ್ದು ನಿಜ ಬಣ್ಣ ಬಯಲಾದಂತಾಗಿದೆ ಎಂದು ಹೇಳಿದರು. ನಗರಸಭೆಯ ಬೆಳವಣಿಗೆಗಳ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಎಚ್.ಡಿ. ದೇವೇಗೌಡರ ಗಮನಕ್ಕೆ ತರಲಾಗುವುದು. ಹೊಂದಾಣಿಕೆ ಹಾಗೂ ವಿಪ್ ಜಾರಿ ಸಂಬಂಧ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಮಾತನಾಡಿದ್ದರು. ಆದರೆ ಬಿಜೆಪಿ– ಕಾಂಗ್ರೆಸ್‌ನ ಅಪವಿತ್ರ ಮೈತ್ರಿಯಿಂದ ಈ ಎಲ್ಲ ಬೆಳವಣಿಗೆ ಆಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.