ADVERTISEMENT

ಗಣೇಶೋತ್ಸವ ಸಂಭ್ರಮ; ಮಣ್ಣಿನ ಮೂರ್ತಿ ಪ್ರತಿಷ್ಠಾಪನೆ

ಹಲವೆಡೆ ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 13:59 IST
Last Updated 3 ಸೆಪ್ಟೆಂಬರ್ 2019, 13:59 IST
ಹಾಸನ ನಗರದ ಪೆಂಡಾಲ್‌ ಗಣೇಶ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಹಾಸನ ನಗರದ ಪೆಂಡಾಲ್‌ ಗಣೇಶ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.   

ಹಾಸನ: ನಗರದಲ್ಲಿ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವಿವಿಧ ಸಂಘಟನೆಗಳು ಸಾಮೂಹಿಕವಾಗಿ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಶ್ರದ್ಧಾ, ಭಕ್ತಿಯಿಂದ ಹಬ್ಬ ಆಚರಿಸಿದವು. ನವನವೀನ ಭಂಗಿಗಳಲ್ಲಿ ಬೃಹತ್‌ ಮೂರ್ತಿಗಳನ್ನು ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿದರೆ, ಮನೆಗಳಲ್ಲಿ ಚಿಕ್ಕ ಮೂರ್ತಿಯನ್ನು ತಂದು ಪೂಜಿಸಲಾಯಿತು. ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಿದವು.

ನಗರದ ಪ್ರಧಾನ ಅಂಚೆ ಕಚೇರಿ ಎದುರಿನ ಪೆಂಡಾಲ್ ಗಣಪತಿ, ಆರ್‍ಎಸ್‍ಎಸ್ ಕಚೇರಿಯಲ್ಲಿ ಜೇಡಿ ಮಣ್ಣಿನಿಂದ ತಯಾರಾದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

ADVERTISEMENT

ಚತುರ್ಥಿ ಅಂಗವಾಗಿ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಾರ್ವಜನಿಕರು ಸರದಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ.

ಮನೆಗಳಲ್ಲೂ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಸೋಮವಾರ ಬೆಳಗ್ಗೆ 4 ರಿಂದಲೇ ಪೂಜಾ ವಿಧಿ ವಿಧಾನ ನೆರವೇರಿದವು. ಬಹುತೇಕ ಸಣ್ಣ ಮೂರ್ತಿಗಳನ್ನು ಸೋಮವಾರ ಸಂಜೆಯೇ ನಗರಸಭೆಯ ಟ್ರ್ಯಾಕ್ಟರ್‌ಗಳಲ್ಲಿ ವಿಸರ್ಜಿಸಲಾಯಿತು. ಅದಕ್ಕೂ ಮುನ್ನ ವಿದ್ಯುತ್‌ ದೀಪಾಲಂಕಾರ ವಾಹನಗಳಲ್ಲಿ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು.

ನಗರದ 11 ಕಡೆ ತಾತ್ಕಾಲಿಕ ಗುಂಡಿಗಳನ್ನು ನಗರಸಭೆ ವ್ಯವಸ್ಥೆ ಮಾಡಿದ್ದು, ಸಣ್ಣ ಗಾತ್ರದ ಮೂರ್ತಿಗಳನ್ನು ಅಲ್ಲಿಯೇ ವಿಸರ್ಜಿಸಲಾಗುತ್ತಿದೆ. ಬೃಹತ್ ಗಾತ್ರದ ಮೂರ್ತಿಗಳನ್ನು ನಗರ ಸಮೀಪದ ಕೆರೆಗಳಲ್ಲಿ ವಿಸರ್ಜನೆ ಮಾಡಲಾಗುತ್ತಿದೆ.

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವಿದ್ಯಾ ನಗರ, ತಣ್ಣೀರುಹಳ್ಳಿ ಎಸ್‍ಡಿಎಂ ಕಾಲೇಜು, ಎಸ್‍ಎಸ್‍ಎಂ ಆಸ್ಪತ್ರೆ, ಪೊಲೀಸ್‌ ಕಚೇರಿ, ಆಟೊ ನಿಲ್ದಾಣ ಸೇರಿದಂತೆ ವಿವಿಧೆಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಯುವಕರು ಸಂಭ್ರಮಿಸಿದರು. ಚಪ್ಪರ ಹಾಕಿ, ಅಲ್ಲಿಯೇ ನೃತ್ಯ, ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.