ADVERTISEMENT

ನೇಮಿನಾಥ ತೀರ್ಥಂಕರರ ರಥೋತ್ಸವ

ಯಕ್ಷಿ ಕೂಷ್ಮಾಂಡಿನಿ ದೇವಿ ಮತ್ತು ಸರ್ವಾಹ್ಣ ಯಕ್ಷ ದೇವರಿಗೆ ಪೂಜಾ ಕೈಂಕರ್ಯ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 19:53 IST
Last Updated 19 ಏಪ್ರಿಲ್ 2019, 19:53 IST
ಶ್ರವಣಬೆಳಗೊಳದಲ್ಲಿ ಭಗವಾನ್‌ ನೇಮಿನಾಥ ತೀರ್ಥಂಕರರ ಮಹಾರಥೋತ್ಸವ ಶುಕ್ರವಾರ ನಡೆಯಿತು
ಶ್ರವಣಬೆಳಗೊಳದಲ್ಲಿ ಭಗವಾನ್‌ ನೇಮಿನಾಥ ತೀರ್ಥಂಕರರ ಮಹಾರಥೋತ್ಸವ ಶುಕ್ರವಾರ ನಡೆಯಿತು   

ಶ್ರವಣಬೆಳಗೊಳ: ಪಟ್ಟಣದಲ್ಲಿ 22ನೇ ತೀರ್ಥಂಕರ ಭಗವಾನ್‌ ನೇಮಿ ನಾಥ ಸ್ವಾಮಿ ಮತ್ತು ಯಕ್ಷಿ ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿ ದೇವಿಯ ಮಹಾರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಭಂಡಾರ ಬಸದಿಯಲ್ಲಿ ಭಗವಾನ್‌ ನೇಮಿನಾಥ ತೀರ್ಥಂಕರರಿಗೆ ಯಕ್ಷಿ ಕೂಷ್ಮಾಂಡಿನಿ ದೇವಿ ಮತ್ತು ಸರ್ವಾಹ್ಣ ಯಕ್ಷ ದೇವರಿಗೆ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. , ಅಲಂಕೃತ ಗೊಂಡ ಮಹಾರಥಕ್ಕೆ ಮಂಗಳವಾದ್ಯ ಗಳೊಂದಿಗೆ 3 ಬಾರಿ ಪ್ರದಕ್ಷಿಣೆ ಹಾಕಿದ ಬಳಿಕ ರಥದೊಳಗೆ ಪ್ರತಿಷ್ಠಾಪಿಸ ಲಾಯಿತು. ಪೂಜೆ ನೇತೃತ್ವವನ್ನು ಪ್ರತಿಷ್ಠಾಚಾರ್ಯರಾದ ಎಸ್‌.ಪಿ.ಉದಯ ಕುಮಾರ್‌, ಎಸ್‌.ಡಿ.ನಂದ ಕುಮಾರ್‌ ದಿನೇಶ್‌ ವಹಿಸಿದ್ದರು.

ಕ್ಷೇತ್ರದ ಪರಂಪರೆಯಂತೆ ಸ್ಥಳೀಯ ಮತ್ತು ವಿವಿಧ ಕಡೆಗಳಿಂದ ಬಂದ ಗಣ್ಯರು ಮತ್ತು ಭಕ್ತರಿಗೆ ಚಾರುಕೀರ್ತಿ ಶ್ರೀಗಳು ಫಲ ನೀಡಿ ಆಶೀರ್ವದಿಸಿದರು.

ADVERTISEMENT

ಭಗವಾನ್‌ ನೇಮಿನಾಥ ತೀರ್ಥಂಕರರ ಕೇವಲಜ್ಞಾನದ ನಂತರ ನಡೆಯುವ ಈ ರಥೋತ್ಸವ ಸಮವಸರಣದ ಪ್ರತೀಕವಾಗಿದ್ದು, ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಇಲ್ಲಿ ಜೈನ ಮಠದ ಮುಂಭಾಗದಲ್ಲಿ ಮಹಾರಥಕ್ಕೆ ಈಡುಗಾಯಿ ಹಾಕುವುದರ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಪಟ್ಟಣದ ಜನರು ಮಹಾರಥಕ್ಕೆ ಬೆಳಿಗ್ಗೆ ಭಂಡಾರ ಬಸದಿಯ ಸುತ್ತ ಎಳೆದು ಅರ್ಧಕ್ಕೆ ಸಾಗಿದ ನಂತರ ನಿಲ್ಲಿಸಲಾಯಿತು. ಮಧ್ಯಾಹ್ನ 4 ಗಂಟೆ ನಂತರ, ಹೋಬಳಿ ಭಾಗದ ಜನರು ರಥವನ್ನು ಎಳೆದು ಮಠದ ಮುಂಭಾಗದ ಸ್ವಸ್ಥಾನಕ್ಕೆ ತಂದರು. ಪ್ರತಿಯೊಬ್ಬರೂ ತೆಂಗಿನಕಾಯಿ, ಹೂವು, ಹಣ್ಣು, ದವನದಿಂದ ರಥಕ್ಕೆ ಪೂಜೆ ಸಲ್ಲಿಸಲಾಯಿತು. ಮೈಸೂರಿನ ಬ್ಯಾಂಡ್‌ಸೆಟ್‌ ಹಾಡುಗಳಿಗೆ ಯುವಕ ಯುವತಿಯರು ಸೇರಿ ನೃತ್ಯ ಮಾಡುತ್ತಾ ನೇಮಿನಾಥ ಭಗವಾನಕೀ ಜೈ ಎಂಬ ಘೋಷಣೆ ಕೂಗುತ್ತಾ ಸಾಗಿದರು.

ಅಹಿಂಸಾ ಪರಮೋ ಧರ್ಮ ಮತ್ತು ಬಾಹುಬಲಿ ಸ್ವಾಮೀ ಕೀ ಎಂಬ ನಾಮಫಲಕದೊಂದಿಗೆ ಮಂಗಳವಾದ್ಯ, ಕಲಾ ತಂಡಗಳು ಸಾಗಿದವು. ಈ ರಥ ಯಾತ್ರೆಯಲ್ಲಿ ಗಣಿನಿ ಆರ್ಯಿಕಾ ವಿಶಾಶ್ರೀ ಮಾತಾಜಿ ಮತ್ತು ಸಂಘಸ್ಥ ತ್ಯಾಗಿಗಳು, ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ತಮಿಳುನಾಡಿನ ಅರಹಂತ ಗಿರಿಯ ಧವಲಕೀರ್ತಿ ಸ್ವಾಮೀಜಿ, ನರಸಿಂಹರಾಜ ಪುರದ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಭಾನುಕೀರ್ತಿ ಸ್ವಾಮೀಜಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮಂಡ್ಯಾದ ಧರಣಪ್ಪ ಕುಟುಂಬ ವರ್ಗದವರು ಭೋಜನದ ಸೇವಾಕರ್ತರಾಗಿದ್ದರು.

ಶ್ರವಣಬೆಳಗೊಳದ ಇಂದ್ರಮ್ಮ ಮಾಣಿಕ್ಯ ಚಂದ್ರಯ್ಯ ಕುಟುಂಬ ವರ್ಗದವರು ಮತ್ತು ಬೆಂಗಳೂರಿನ ತೀರ್ಥಂಕರ್‌ ಕೇಬಲ್‌ ನೆಟ್‌ವರ್ಕ್ಸ್‌ನ ನಾಗರಾಜ್‌ ಮಜ್ಜಿಗೆ, ಪಾನಕ, ಕೋಸಂಬರಿ ವ್ಯವಸ್ಥೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.